ಬೀದರ್ | ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಸದನದಲ್ಲಿ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯ
ಬೀದರ್ : ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಒತ್ತಾಯಿಸಿದ್ದಾರೆ.
ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ಸಿಗದಿದ್ದಕ್ಕೆ ಬೇಸತ್ತು ಸಂತ್ರಸ್ತರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಶುಕ್ರವಾರ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಧ್ವನಿಸಿತು.
ಅಧಿವೇಶನದಲ್ಲಿ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯ ಎದುರು ಎರಡು ವರ್ಷದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಸಂತ್ರಸ್ತರು, ಸರ್ಕಾರದ ಅಸಡ್ಡೆ ಧೋರಣೆಗೆ ಬೇಸತ್ತು ಮಾಡು ಇಲ್ಲವೇ ಮಡಿ ಹೋರಾಟವನ್ನು ಆರಂಭಿಸಿದ್ದಾರೆ ಎಂದು ಘಟನೆಯನ್ನು ಸಭಾಧ್ಯಕ್ಷ ಹಾಗೂ ಸರ್ಕಾರದ ಗಮನಕ್ಕೆ ತಂದರು.
ನಿನ್ನೆ ಮೂವರು ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರು ಬ್ರಿಮ್ಸ್ ಆಸ್ಪತ್ರೆ ತೀವ್ರ ನಿಗಾ ಘಟಕ (ಐಸಿಯು) ನಲ್ಲಿ ಸಾವು-ಬದುಕಿನ ಮಧ್ಯ ಹೋರಾಟ ನಡೆಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು, ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ, ಶಾಸಕರಾದ ಪ್ರಭು ಚವ್ಹಾಣ, ಶರಣು ಸಲಗರ, ಸಿದ್ದು ಪಾಟೀಲ ಸಹ ಡಾ.ಬೆಲ್ದಾಳೆ ಅವರ ಬೇಡಿಕೆಗೆ ಧ್ವನಿಗೂಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ಸಂತ್ರಸ್ತರ ಆತ್ಮಹತ್ಯೆವರೆಗೂ ಹೋಗಿರುವುದು ಕಳವಳಕಾರಿ. ಸ್ಥಳೀಯ ಜನಪ್ರತಿನಿಧಿಗಳೆಲ್ಲರೂ ರೈತರ ಜೊತೆಗೆ ಇರಬೇಕು. ಯಾವೊಬ್ಬ ರೈತ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕದಂತೆ ನೋಡಿಕೊಳ್ಳಬೇಕು. ಇಂಥ ವಿಷಯ ಬಂದಾಗ ಸಂಬಂಧಿತ ಸಚಿವರ ಕಚೇರಿಗೆ ಹೋಗಿ ಚರ್ಚಿಸಿ, ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಸದ್ಯ ಸಚಿವರು ಸದನದಲ್ಲಿಲ್ಲ. ಹೀಗಾಗಿ ಸೋಮವಾರ ಅವರಿಂದ ಉತ್ತರ ಕೊಡಿಸಲಾಗುವುದು ಎಂದು ಭರವಸೆ ನೀಡಿ, ಚರ್ಚೆಗೆ ತೆರೆ ಎಳೆದರು.