ಬೀದರ್ | ಮಹಾರಾಷ್ಟ್ರದ ಪರಭಣಿಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ : ಕಿಡಿಗೇಡಿಗಳ ಗಡಿಪಾರಿಗೆ ಆಗ್ರಹ
ಬೀದರ್ : ಮಹಾರಾಷ್ಟ್ರದ ಪರಭಣಿ ಜಿಲ್ಲೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮತ್ತು ಸಂವಿಧಾನದ ಪ್ರತಿಮೆಗೆ ಅವಮಾನ ಮಾಡಿರುವ ಕಿಡಿಗೇಡಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ, ದೇಶದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳಿಂದ ಬಸವಕಲ್ಯಾಣ ನಗರದ ಅಂಬೇಡ್ಕರ್ ಪ್ರತಿಮೆ ಎದುರುಗಡೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ರೈಲು ನಿಲ್ದಾಣದ ಹೊರಗೆ ಇರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಕೆಲವೊಂದು ಕಿಡಿಗೇಡಿಗಳು ಅವಮಾನ ಮಾಡಿ ಪ್ರತಿಮೆಯ ಎದುರು ಇರುವ ಸಂವಿಧಾನದ ಪ್ರತಿಕೃತಿಯನ್ನು ವ್ಯಕ್ತಿಯೊಬ್ಬ ಧ್ವಂಸಗೊಳಿಸಿದ ಘಟನೆ ನಡೆದಿದೆ. ಇದರಿಂದಾಗಿ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗಿದ್ದು, ಇಂತಹ ವ್ಯಕ್ತಿಯ ಮೇಲೆ ಸರಕಾರ ಕಠಿಣ ಕಾನೂನು ಕ್ರಮ ಜರುಗಿಸಿ ದೇಶದ್ರೋಹದ ಪ್ರಕರಣ ದಾಖಲಿಸಿಕೊಂಡು ದೇಶದಿಂದ ಗಡಿಪಾರು ಮಾಡಬೇಕು ಮತ್ತು ರಾಷ್ಟ್ರೀಯ ನಾಯಕರ ಪ್ರತಿಮೆಗಳಿಗೆ ರಕ್ಷಣೆ ನೀಡುವಂತೆ ಈ ಸಂದರ್ಭದಲ್ಲಿ ಆಗ್ರಹಿಸಿದ್ದರು.
ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆಯ ತಾಲ್ಲೂಕು ಅಧ್ಯಕ್ಷ ವಿಶ್ವನಾಥ (ಪಿಂಟು) ಕಾಂಬಳೆ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಸಿಕಂದರ ಸಿಂಧೆ, ವಿಜಯಕುಮಾರ್ ಡಾಂಗೆ, ವಾಯ್ಸ್ ಆಫ್ ಅಂಬೇಡ್ಕರ್ ರಾಜ್ಯಾಧ್ಯಕ್ಷ ಸುರೇಶ್ ಮೋರೆ, ಮಹಾದೇವ್ ಗಾಯಕವಾಡ್, ಪ್ರಫುಲ್ ಗಾಯಕವಾಡ್, ಗೌತಮ್ ಜ್ಯಾಂತೆ, ಚೈತನ್ ಕಾಡೆ ಹಾಗೂ ಮತ್ತಿತರರು ಭಾಗವಹಿಸಿದ್ದರು.