ಬೀದರ್ | ಒಳಮೀಸಲಾತಿ ಸಂವಿಧಾನ ವಿರೋಧಿಯಾಗಿದೆ : ವೈಜಿನಾಥ್ ಸೂರ್ಯವಂಶಿ

ಬೀದರ್ : ಒಳಮೀಸಲಾತಿ ಎನ್ನುವುದು ಸಂವಿಧಾನ ವಿರೋಧಿಯಾಗಿದೆ. ಅದನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಒಳಮೀಸಲಾತಿ ವಿರೋಧಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ವೈಜೀನಾಥ್ ಸೂರ್ಯವಂಶಿ ಅವರು ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲಿಗೆ ಪರಿಶಿಷ್ಟ ಜಾತಿಯಲ್ಲಿ ಬರೀ 6 ಜಾತಿಗಳಿದ್ದವು. ಆದರೆ ಯಾರು ಕೂಡ ಹೋರಾಟ ಮಾಡದಿದ್ದರೂ ಪರಿಶಿಷ್ಟ ಜಾತಿಯಲ್ಲಿ ಸುಮಾರು 101 ಜಾತಿಗಳನ್ನು ಸೇರಿಸಲಾಗಿದೆ. ಹಾಗೆಯೇ ಸಾಮಾಜಿಕ ಸಮಾನತೆ ತರುವುದಕ್ಕೆ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೀಸಲಾತಿ ನೀಡಿದ್ದರು. ಆದರೆ ಈಗ ಇಡಬ್ಲ್ಯೂ ಎಸ್ ಹೆಸರಿನಲ್ಲಿ ಉಳ್ಳವರಿಗೆ ಮೀಸಲಾತಿ ನೀಡಲಾಗಿದೆ. ಇದು ಸಂಪೂರ್ಣವಾಗಿ ಸಂವಿಧಾನದ ವಿರೋಧಿಯಾಗಿದೆ. ಇದರಿಂದಾಗಿ ಒಬಿಸಿ ಜನರಿಗೆ ತುಂಬಾ ಅನ್ಯಾಯವಾಗಿದೆ. ಆದರೆ ಒಬಿಸಿ ಜನ ಇನ್ನು ಕೂಡ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ಕಾಂತರಾಜ್ ವರದಿ ವೈಜ್ಞಾನಿಕ ವರದಿಯಾಗಿದ್ದು, ಅದನ್ನು ಬದಿಗೆ ಸರಿಸಿ ರಾಜಕೀಯ ಲಾಭಕ್ಕೋಸ್ಕರ ಒಳಮಿಸಲಾತಿ ಎನ್ನುವುದು ಜಾರಿಗೆ ತರುತ್ತಿದ್ದಾರೆ. ಒಳಮೀಸಲಾತಿ ಬದಲಾಗಿ ಕಾಂತರಾಜ್ ವರದಿ ಜಾರಿಗೆ ತಂದರೆ ಉಪಯೋಗವಾಗಲಿದೆ. ಆದರೆ ನಮ್ಮವರೆ ಕೆಲವೊಂದು ಜನ ಒಳಮೀಸಲಾತಿ ಜಾರಿಗೆ ತನ್ನಿ ಎಂದು ಹೋರಾಟ ಆರಂಭಿಸಿದ್ದಾರೆ. ಅವರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲ ಎಂದು ಇದರಿಂದ ಗೊತ್ತಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಡಾ.ನಾಗಮೋಹನದಾಸ್ ಅವರಿಗೆ ಮನವಿ ಪತ್ರ ಸಲ್ಲಿಸುವುದರ ಮೂಲಕ ಒಳಮೀಸಲಾತಿ ಜಾರಿಗೆ ತರಬಾರದು ಎಂದು ತಿಳಿಸುತ್ತೇವೆ. ಒಳಮಿಸಲಾತಿ ವಿರೋಧಿ ಹೋರಾಟ ಸಮಿತಿಯಿಂದ ಜನರನ್ನು ಎಚ್ಚರಿಸಿ ಇದರ ವಿರುದ್ಧ ಶಾಂತಿಯುತವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ರಾಜಕುಮಾರ್ ಮೂಲಭಾರತಿ, ಜಿಲ್ಲಾಧ್ಯಕ್ಷ ವಿಷ್ಣುವರ್ಧನ್ ವಾಲ್ದೊಡ್ಡಿ, ಕಾರ್ಯಾಧ್ಯಕ್ಷ ಚಂದ್ರಕಾಂತ್ ನಿರಾಟೆ, ಉಪಾಧ್ಯಕ್ಷ ದಯಾನಂದ್ ನವಲೆ, ಸಂಜುಕುಮಾರ್ ಮೇತ್ರೆ, ರವಿ ಕೊಟಂಬೆ, ಸಂಜುಕುಮಾರ್ ಜಂಜಿರ್, ಗೌತಮ್ ಚೌವ್ಹಾಣ್, ರವಿ ಭೂಸಂಡೆ ಹಾಗೂ ರಾಮು ಸೇರಿದಂತೆ ಇತರರು ಉಪಸ್ಥಿತರಿದ್ದರು.