ಬೀದರ್ | ಮಹಿಳೆಯರಿಗೆ ಸಿಕ್ಕ ಅಧಿಕಾರ ಮಹಿಳೆಯರೇ ಅನುಭವಿಸುವಂತಾಗಲಿ : ಶಕುಂತಲಾ ಬೆಲ್ದಾಳೆ

ಬೀದರ್ : ಇಂದಿನ ದಿನಗಳಲ್ಲಿ ಮಹಿಳೆಯರು ತಮಗೆ ಸಿಕ್ಕ ಅಧಿಕಾರ ಉಪಯೋಗಿಸಲು ಸಾಧ್ಯವಾಗದೆ ಪತಿ ಹಾಗೂ ಮಕ್ಕಳಿಗೆ ವಹಿಸಿಕೊಡುತ್ತಿರುವುದು ಅಸಮಾಧಾನದ ಸಂಗತಿ. ಹಾಗಾಗಿ ಮಹಿಳೆಯರು ತಮಗೆ ಸಿಕ್ಕ ಅಧಿಕಾರ ತಾವೇ ಅನುಭವಿಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹೇಳಿದರು.
ಇಂದು ನಗರದ ಕರ್ನಾಟಕ ಸಾಹಿತ್ಯ ಸಂಘದ ಸಾಂಸ್ಕೃತಿಕ ಭವನದಲ್ಲಿ ಅಕ್ಕ ಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘ, ರಾಣಿ ಕಿತ್ತೂರ ಚೆನ್ನಮ್ಮ ಮಹಿಳಾ ಮಂಡಳ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಡಾ.ಪ್ರೇಮಾ ಸಿರ್ಸೆ ಅವರ ಚುಕ್ಕಿಗಳು ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿಯೇ ಅಕ್ಕ ಮಹಾದೇವಿಯಂತಹ ಅನೇಕ ಸಾಧಕಿಯರು ಇದ್ದರು. ಈಗಲೂ ಕೂಡ ಇದ್ದಾರೆ. ಆದರೆ ಅವರಿಗೆ ಪ್ರೋತ್ಸಾಹ ಇಲ್ಲದೆ ಅವರು ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಪ್ರತಿ ಮಹಿಳೆ ಗುರಿ ಇಟ್ಟುಕೊಂಡಾಗ ಮಾತ್ರ ಅದನ್ನು ಸಾಧಿಸಲು ಸಾಧ್ಯವಾಗುತ್ತದೆ. ಗ್ರಾಮ ಪಂಚಾಯತಿಯಲ್ಲಿ ಶೇ.50 ರಷ್ಟು ಮಿಸಲಾತಿ ಸಿಕ್ಕರು ಅದನ್ನು ನಾವು ಅನುಭವಿಸದೆ ನಮ್ಮ ಕುಟುಂಬಸ್ಥರಿಗೆ ಅನುಭವಿಸಲು ಅನುವು ಮಾಡಿಕೊಡುತ್ತಿರುವುದು ಸರಿಯಲ್ಲ ಎಂದು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮಾತನ್ನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ವಿದ್ಯಾ ಎಸ್. ಪಾಟೀಲ್ ಅವರು ವಿಶೇಷ ಉಪನ್ಯಾಸ ನೀಡಿ, ಮಹಿಳೆಯರಲ್ಲಿ ಧೈರ್ಯ ಮತ್ತು ಜೀವನಶೈಲಿ ಬರಬೇಕು. ಮಹಿಳೆ ಎಲ್ಲ ಕ್ಷೇತ್ರದಲ್ಲಿ ಬೆಳೆಯಬೇಕು. ನಮಗೆ ಎಲ್ಲಾ ರೀತಿಯ ಅಧಿಕಾರ ಇದ್ದಾಗ ಮಾತ್ರ ಸಮಾನತೆ ಸಾಧ್ಯವಿದೆ. ಇಂದಿಗೂ ಮಹಿಳೆಯರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೆ ಇರುವುದು ದುರಾದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸ್ತ್ರೀಯರು ತಮ್ಮ ಮೂಲಭೂತ ಹಕ್ಕಿಗಾಗಿ ಹೋರಾಟ ಮಾಡಬೇಕಾಗಿದೆ. ಭ್ರೂಣ ಹತ್ಯೆಯಂತಹ ಘಟನೆಗಳು ಸಮಾಜದಲ್ಲಿ ಕಡಿಮೆಯಾಗಬೇಕು. ಪೋಷಕರು, ವಿಶೇಷವಾಗಿ ತಾಯಂದಿರು ತನ್ನ ಮಗಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೇ ವಿನಃ ಅವರನ್ನು ಹಿಂದಕ್ಕೆ ತಳ್ಳುವ ಪ್ರವರ್ತಿ ಬಿಡಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಮಹಿಳಾ ಸಾಹಿತಿ ಡಾ.ಪ್ರೇಮಾ ಸಿರ್ಸೆ ಅವರು ಬರೆದ ಚುಕ್ಕಿಗಳು ಪುಸ್ತಕ ಪರಿಚಯ ಮಾಡಿದ ಕನ್ನಡ ಸಹ ಪ್ರಾಧ್ಯಾಪಕಿ ಡಾ.ಮಹಾದೇವಿ ಹೆಬ್ಬಾಳೆ ಅವರು, ಕವನ ಸಂಕಲದಲ್ಲಿರುವ ಅನೇಕ ಪ್ರಮುಖ ಸಂಗತಿಗಳ ಬಗ್ಗೆ ಮೆಕಲು ಹಾಕಿದರು. ಕಳೆದ 30 ವರ್ಷಗಳ ಹಿಂದೆ ಹೊರತಂದ ಈ ಕೃತಿ ಇಂದಿಗೂ ಜನರ ಮನದಲ್ಲಿ ಮನೆಮಾತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ಮಹಿಳಾ ಮಂಡಳ ಅಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ, ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಡಾ.ಸಾವಿತ್ರಿ ಹೆಬ್ಬಾಳೆ, ತಿಂಗಳ ಪುಸ್ತಕ ಪರಿಚಯ ಸಮಿತಿಯ ಅಧ್ಯಕ್ಷೆ ಡಾ. ಸುನೀತಾ ಕೂಡ್ಲಿಕರ್, ರೀಟಾ, ಜಾನಪದ ಮಹಿಳಾ ಘಟಕದ ಮಲ್ಲಮ್ಮ ಸಂತಾಜಿ, ಭುವನೇಶ್ವರಿ ಹಿರೇಮಠ್, ಪುಣ್ಯವತಿ ವಿಸಾಜಿ ಹಾಗೂ ಮಲ್ಲಮ್ಮಾ ಹೆಬ್ಬಾಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.