ಬೀದರ್ | ಆಹಾರ ತಯಾರಕರು, ವಿತರಕರಿಗೆ ಪರವಾನಿಗೆ ಕಡ್ಡಾಯ : ಡಾ.ಸಂತೋಷ್
ಬೀದರ್ : ಭಾಲ್ಕಿ ನಗರದ ಎಲ್ಲಾ ಆಹಾರ ಪದಾರ್ಥಗಳ ತಯಾರಕರು ಹಾಗೂ ಇತರೆ ಆಹಾರ ಪದಾರ್ಥಗಳ ಮಾರಾಟಗಾರರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೋಂದಣಿ ಹಾಗೂ ಪರವಾನಿಗೆ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಬೀದರ್ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಅಧಿಕಾರಿಗಳಾದ ಡಾ.ಸಂತೋಷ ಹೇಳಿದ್ದಾರೆ.
ಶುಕ್ರವಾರ ಭಾಲ್ಕಿಯ ರೋಟರಿ ಕ್ಲಬ್ ಐಎಂಎ ಹಾಲ್ ನಲ್ಲಿ ವಿಶೇಷ ನೋಂದಣಿ ಮತ್ತು ಪರವಾನಿಗೆ ಆಂದೋಲನ್ ಬಗ್ಗೆ ಹಮ್ಮಿಕೊಂಡಿದ್ದ ʼಒಂದು ದಿನದ ಕಾರ್ಯಾಗಾರʼ ಉದ್ಘಾಟಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳು ಯಾವುದೇ ತರಹದ ಕೃತಕ ಪರ್ದಾಥಗಳನ್ನು, ಟೇಸ್ಟಿಂಗ್ ಪೌಡರ್ ಗಳು, ಪಾನಿಪೂರಿ ನೀರಿನಲ್ಲಿ ಸಿಟ್ರಸ್ ಹಾಗೂ ಬಾಳೆ ಹಣ್ಣುಗಳನ್ನು ರೈಪನಿಂಗ್ ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು.
ಒಂದು ವೇಳೆ ಕೃತಕ ಪದಾರ್ಥಗಳನ್ನು ಉಪಯೋಗಿಸಿದರೆ ಅಂಥವರ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ವತಿಯಿಂದ ಸೂಕ್ತ ಕ್ರಮ ಕೈಗೂಳಲಾಗುವುದು ಎಂದು ತಿಳಿಸಿದ ಅವರು, ವ್ಯಾಪಾರಿಗಳು ಸ್ವಚ್ಛತೆಯನ್ನು ಕಾಪಾಡುವುದು, ಹ್ಯಾಂಡ್ ಗ್ಲೌಸ್ ಮತ್ತು ತಲೆಗೆ ಟೋಪಿಗಳ ಬಳಕೆ ಮಾಡಬೇಕೆಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿ ಸೋಮನಾಥ ತರನಳ್ಳೆ, ಔರಾದ(ಬಿ) ತಾಲ್ಲೂಕು ಆಹಾರ ಸುರಕ್ಷತಾಧಿಕಾರಿ ಕಿಶೋರ ಕುಮಾರ್, ನರಸಿಂಹ ರಾಘವೆಂದ್ರ ಬೇಕರಿ ಮತ್ತು ನುಮಾನ್ ಬೇಕರಿಯ ಮಾಲಕರು ಮತ್ತು ವ್ಯಾಪಾರಿಗಳು ಸೇರಿದಂತೆ ಇತರರು ಉಪಸ್ಥಿತರಿದರು.