ಬೀದರ್ | ಮಹಾಡ್ ಸತ್ಯಾಗ್ರಹವು ಸಮಾನತೆಗಾಗಿ ಮಾಡಿದ ಹೋರಾಟವಾಗಿದೆ : ಪ್ರವೀಣ್ ಮೊರೆ

ಬೀದರ್ : ಮಹಾಡ್ ಕೆರೆ ನೀರಿನ ಸತ್ಯಾಗ್ರಹವು ಸಮಾನತೆಗಾಗಿ ಮಾಡಿದ ದೊಡ್ಡ ಹೋರಾಟವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಪ್ರವೀಣ್ ಮೊರೆ ಅವರು ಅಭಿಪ್ರಾಯಪಟ್ಟರು.
ಇಂದು ಭಾಲ್ಕಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಹಾಡ್ ಚವದಾರ ಕೆರೆಯ ಸತ್ಯಾಗ್ರಹ ದಿನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1927ರಲ್ಲಿ ಡಾ.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಮಹಾಡ್ ಕೆರೆಯ ನೀರು ಸ್ಪರ್ಶ ಮಾಡುವ ಮೂಲಕ ಸಮತಾಂದೋಲನವೆ ನಡೆಯಿತು. ಅಸ್ಪೃಶ್ಯತೆಯು ಅತ್ಯಂತ ಕಠಿಣವಾಗಿ ಆಚರಿಸುವ ಆ ಕಾಲಘಟ್ಟದಲ್ಲಿ ಅಸ್ಪೃಶ್ಯರು ಹನಿ ನೀರಿಗಾಗಿ ಪರಿದಾಡುತ್ತಿದ್ದರು. ಜನರು ಸಾರ್ವಜನಿಕವಾಗಿರುವ ಕೆರೆ ನೀರಿನ ಸೌಲಭ್ಯದಿಂದ ವಂಚಿತರಾಗಿದ್ದರು. ಆವಾಗ ಡಾ.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟ ನಡೆಯಿತು ಎಂದು ತಿಳಿಸಿದರು.
ಆ ಹೋರಾಟ ಕೇವಲ ನೀರಿಗಾಗಿ ಅಲ್ಲದೆ, ನಾವು ಎಲ್ಲರಂತೆ ಮಾನವರಾಗಿದ್ದೇವೆ ಎಂದು ಸಾರಿತು. ಸಾವಿರಾರು ಜನ ಸಮೂಹದೊಂದಿಗೆ ಕೆರೆ ನೀರು ಕುಡಿಯುವುದರ ಮೂಲಕ ಸಮಾನತೆಗಾಗಿ ಮಾಡಿದ ಒಂದು ದೊಡ್ಡ ಚಳುವಳಿಯೇ ಮಹಾಡ್ ಚವದಾರ್ ಕೆರೆ ಸತ್ಯಾಗ್ರಹ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಪ್ರದೀಪ್ ಭಾವಿಕಟ್ಟೆ, ಸಿದ್ಧಾರ್ಥ್ ಪ್ಯಾಗೆ, ತುಕಾರಾಮ್ ಕಾಸ್ಲೆ, ಸುರೇಶ್ ಭಾವಿಕಟ್ಟೆ, ಮರಾಠಾ ಸಮುದಾಯದ ಮುಖಂಡ ವೈಜೀನಾಥ್ ತಗಾರೆ, ಮನೋಜ್ ಕಾಂಬ್ಳೆ, ಶಿವಕುಮಾರ್ ಸಿಂಧೆ, ಪ್ರಕಾಶ್ ಗಾಯಕವಾಡ್, ಹುಸೇನ್ ಹಾಗೂ ಅಂಬದಾಸ್ ಸಿಂಧೆ ಸೇರಿದಂತೆ ಇತರರು ಹಾಜರಿದ್ದರು.