ಬೀದರ್ | ಸಮಾನ ನ್ಯಾಯ ಸಿಕ್ಕಾಗ ಮಾತ್ರ ಮನುಷ್ಯ ಗೌರವದಿಂದ ಬದುಕಲು ಸಾಧ್ಯ: ಮುಹಮ್ಮದ್ ಕುಂಞಿ
ಬೀದರ್ : ಯಾರು ಒಳ್ಳೆಯವರು, ಕೆಟ್ಟವರು ಎಂಬುದು ನಿರ್ಧರಿಸುವ ಅಧಿಕಾರಿ ಮನುಷ್ಯನಿಗೆ ಇಲ್ಲ. ನ್ಯಾಯವನ್ನು ಖರೀದಿಸಲು ಸಾಧ್ಯವಿಲ್ಲ. ಸಮಾನ ನ್ಯಾಯ ಪ್ರತಿಯೊಬ್ಬರಿಗೂ ಸಿಕ್ಕಾಗ ಮಾತ್ರ ಮನುಷ್ಯ ಗೌರವದಿಂದ ಬದುಕಲು ಸಾಧ್ಯ ಎಂದು ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞಿ ಹೇಳಿದರು.
ಶುಕ್ರವಾರ ಬಸವಕಲ್ಯಾಣ ನಗರದ ಸಭಾ ಭವನದಲ್ಲಿ ನಡೆದ 9ನೇ ಕುರ್ ಆನ್ ಪ್ರವಚನ ಕಾರ್ಯಕ್ರಮದ ಮೊದಲ ದಿನ ʼಮನುಷ್ಯನ ಘನತೆ ಮತ್ತು ಗೌರವʼದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಎಲ್ಲರೂ ಎಲ್ಲ ಹಂತಗಳಲ್ಲಿಯೂ ನ್ಯಾಯದ ಪರವಾಗಿ ಇರಬೇಕು. ಮೌಲ್ಯದಿಂದ ಕೂಡಿದ ಬದುಕು ಸಾರ್ಥಕವಾಗಿದೆ. ಚಿನ್ನಕ್ಕೂ ತುಕ್ಕು ಹಿಡಿಯುವ ಕಾಲ ಇದಾಗಿದೆ. ಆದರೆ ಮೌಲ್ಯಯುತ ಬದುಕು ಪರಿಪೂರ್ಣ ಮನುಷ್ಯನಾಗಿ ಬದುಕಲು ರಹದಾರಿ ಮಾಡಿಕೊಟ್ಟು, ಮನುಷ್ಯ ಘನತೆ ಮತ್ತು ಗೌರವದಿಂದ ಬದುಕನ್ನು ಸ್ಥಾಪನೆ ಸಾಧ್ಯ ಎಂದು ಪ್ರವಾದಿ ಮುಹಮ್ಮದ್ ಪೈಗಂಬರರು ಕಲಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಯಾವುದೇ ಸಾಧನಗಳು ಇಲ್ಲ. ಆದರೆ ಕುರ್ ಆನ್ ನಲ್ಲಿ ಶಾಂತಿ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುವುದನ್ನು ಕಲಿಸಿಕೊಡುತ್ತದೆ. ಮಾನವೀಯ ಸಂಬಂಧಗಳು ಕಳಚಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ತಂತ್ರಜ್ಞಾನದಲ್ಲಿ ಮುಂಚೂಣಿ ಸಾಧಿಸುತ್ತಿದ್ದೇವೆ. ಆದರೆ ವಾಸ್ತವದಲ್ಲಿ ನಾವು ನಮ್ಮವರಿಂದ ದೂರವಾಗುತ್ತಿದ್ದೇವೆ ಎಂದರು.
ಕುರ್ ಆನ್ ನಲ್ಲಿ ನಮಾಝ್, ಹಜ್, ಉಪವಾಸ ಆಚರಣೆಗೆ ಸಡಲಿಕೆ ನೀಡಲಾಗಿದೆ. ಆದರೆ ಸುಳ್ಳು ಹೇಳುವುದಕ್ಕೆ, ಅಸಭ್ಯ ಮಾತನಾಡಲು ಸಡಲಿಕೆ ನೀಡಲಿಲ್ಲ. ಕುರ್ ಆನ್ ಬದುಕಿನಲ್ಲಿ ಮೌಲ್ಯವನ್ನು ತಿಳಿಸಿಕೊಡುತ್ತದೆ. ಕಪ್ಪು ಬಿಳಿ ಚರ್ಮವನ್ನು ಸಮಾನ ಎನ್ನುವ ಮೌಲ್ಯ ಕಲ್ಪಿಸಿಕೊಡುತ್ತದೆ ಎಂದು ಉಪದೇಶ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಬೆಲ್ಗಾಮಿ ಮಹಮ್ಮದ್ ಸಾದ್, ಡಾ.ಶಿವಾನಂದ ಮಹಾಸ್ವಾಮಿ, ಹವಾಮಲ್ಲಿನಾಥ್ ಮಹಾರಾಜ್, ವಿಜಯ್ ಸಿಂಗ್, ಮುಕುಲ್ ಜೈನ್, ಡಾ.ಅಬ್ದುಲ್ ಖದಿರ್, ತಹಶೀಲ್ದಾರ್ ಶಿವಾನಂದ್ ಮೇತ್ರೆ, ದತ್ತಾತ್ರೇಯ ಜಿ.ಗಾದಾ, ಅಸ್ಲಮ್ ಜನಾಬ್, ಮುಹಮ್ಮದ್ ಅಲ್ತಾಫ್ ಅಮ್ಜಾದ್ ಮಾತನಾಡಿದರು.
ಕುರ್ ಆನ್ ಪ್ರವಚನ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.