ಬೀದರ್ | ಶಾಹೀನ್ ಶಿಕ್ಷಣ ಸಂಸ್ಥೆಗಳ ನೆರವಿನಿಂದ ಸೆಕ್ರೆಡ್ ಹಾರ್ಟ್ ಚರ್ಚಿನಲ್ಲಿ ಸ್ವಯಂ ಅಧ್ಯಯನ ಕೇಂದ್ರ ಆರಂಭ

Update: 2024-12-20 11:16 GMT

ಬೀದರ್ : ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನೆರವಿನೊಂದಿಗೆ ನಗರದ ಸೆಕ್ರೆಡ್ ಹಾರ್ಟ್ ಚರ್ಚಿನಲ್ಲಿ ಸ್ವಯಂ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ.

ಸಮಾರಂಭದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ವಿದ್ಯಾರ್ಥಿಗಳ ಏಕಾಗ್ರತೆಯ ಓದಿಗೆ ಅನುಕೂಲ ಮಾಡಿಕೊಡಲು ಶಾಹೀನ್ ಹಾಗೂ ಚರ್ಚ್ ಸಹಯೋಗದಲ್ಲಿ ಸ್ವಯಂ ಅಧ್ಯಯನ ಕೇಂದ್ರ ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ಜಿಲ್ಲೆಯ ಆಯ್ದ ಧಾರ್ಮಿಕ ಸ್ಥಳಗಳಲ್ಲಿ ಅಧ್ಯಯನ ಕೇಂದ್ರ ಆರಂಭಿಸಲು ಶಾಹೀನ್ ಶಿಕ್ಷಣ ಸಂಸ್ಥೆ ನೆರವಾಗಲಿದೆ ಎಂದು ಹೇಳಿದರು.

ಸೆಕ್ರೆಡ್ ಹಾರ್ಟ್ ಚರ್ಚ್ ಕೇಂದ್ರಕ್ಕೆ ಸಲೀಸಾಗಿ ಮಡಚಿಡುವ ಬೇರೆಡೆ ಸಾಗಿಸಬಹುದಾದ ಅಧ್ಯಯನದ ಪೀಠೋಪಕರಣಗಳನ್ನು ನೀಡಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಅಧ್ಯಯನ ಕೇಂದ್ರದಲ್ಲಿ ಮೊಬೈಲ್ನಿಂದ ದೂರ ಉಳಿದು ಒತ್ತಡಮುಕ್ತರಾಗಿ ಏಕಾಗ್ರತೆಯಿಂದ ಅಧ್ಯಯನ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈಗಾಗಲೇ ದೊಡ್ಡ ದೊಡ್ಡ ನಗರಗಳಲ್ಲಿ ಖಾಸಗಿ ಸ್ವಯಂ ಅಧ್ಯಯನ ಕೇಂದ್ರಗಳು ಹುಟ್ಟಿಕೊಂಡಿವೆ. ಸಂಘ ಸಂಸ್ಥೆಯವರು ಜಿಲ್ಲೆಯ ಮಂದಿರ, ಮಸೀದಿ, ಚರ್ಚ್, ಪ್ರಾರ್ಥನಾ ಮಂದಿರ, ಸಮುದಾಯ ಭವನಗಳಲ್ಲಿ ಸ್ವಯಂ ಅಧ್ಯಯನ ಕೇಂದ್ರಗಳನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಬಹುದು. ಅಧ್ಯಯನ ಕೇಂದ್ರಗಳು ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಬೆಳೆಸಲಿದ್ದು, ಶೈಕ್ಷಣಿಕ ಪ್ರಗತಿಗೂ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಉದ್ಘಾಟಕರಾಗಿ ಕಲಬುರಗಿಯ ಫಾದರ್ ಆನಂದಪ್ರಭು ಉಪಸ್ಥಿತರಿದ್ದರು. ಜೊತೆಗೆ ಫಾದರ್ ಕ್ಲೇರಿ, ಫಾದರ್ ವಿಲ್ಸನ್ ಫರ್ನಾಂಡೀಸ್, ಸಿಸ್ಟರ್ ಏಲಿಜಾ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News