ಬೀದರ್ | ಬೇಸಿಗೆಯಲ್ಲಿ ಹಕ್ಕಿಗಳಿಗೆ ನೀರುಣಿಸಿ ಅವುಗಳ ಸಂತತಿ ಉಳಿಸಿ : ವೀರಭದ್ರಪ್ಪ ಉಪ್ಪಿನ್

Update: 2025-03-20 17:29 IST
ಬೀದರ್ | ಬೇಸಿಗೆಯಲ್ಲಿ ಹಕ್ಕಿಗಳಿಗೆ ನೀರುಣಿಸಿ ಅವುಗಳ ಸಂತತಿ ಉಳಿಸಿ : ವೀರಭದ್ರಪ್ಪ ಉಪ್ಪಿನ್
  • whatsapp icon

ಬೀದರ್ : ಬೇಸಿಗೆಯ ಆರಂಭದ ದಿನಗಳಲ್ಲಿಯೇ ತಾಪಮಾನ ಹೆಚ್ಚುತ್ತಿದೆ. ಇದರಿಂದಾಗಿ ಪಕ್ಷಿಗಳು ಕುಡಿಯಲು ನೀರು ಸಿಗದೇ ಸಾವನ್ನಪ್ಪುತ್ತಿವೆ. ಗುಬ್ಬಚ್ಚಿ, ಕಾಗೆ, ಪಾರಿವಾಳ ಹಾಗೂ ಇತರ ಸಾಮಾನ್ಯ ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿ ಅವುಗಳ ಸಂತತಿ ಉಳಿಸಬೇಕು ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್ ಅವರು ಜನತೆಗೆ ಕರೆ ನೀಡಿದರು.

ಇಂದು ವಿಶ್ವ ಗುಬ್ಬಚ್ಚಿ ದಿನಾಚರಣೆಯ ಅಂಗವಾಗಿ ಹಿರಿಯರ ಯೋಗ ತಂಡದಿಂದ ನಗರದ ಬರೀದ್ ಶಾಹಿ ಉದ್ಯಾನದಲ್ಲಿ ಹಕ್ಕಿ, ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರವನ್ನು ಸಮತೋಲನದಲ್ಲಿಡಲು ಪಕ್ಷಿಗಳ ಪಾತ್ರ ಮಹತ್ವದ್ದಾಗಿದೆ. ಮನೆ, ಕಚೇರಿ, ಸಾರ್ವಜನಿಕ ಸ್ಥಳ, ರಸ್ತೆಗಳ ಬದಿ, ಉದ್ಯಾನಗಳು ಮುಂತಾದ ಸ್ಥಳಗಳಲ್ಲಿ ಸಾಧ್ಯ ವಾದಷ್ಟು ಪಕ್ಷಿಗಳಿಗೆ ಕುಡಿಯುವ ನೀರು ಸಿಗುವಂತಹ ವ್ಯವಸ್ಥೆ ಮಾಡುವ ಮೂಲಕ ಮೂಕ ಪಕ್ಷಿಗಳ ಸಂತತಿ ನಾಶವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಕಳೆದ ಏಳು ವರ್ಷಗಳಿಂದ ಸರ್ಕಾರ ಹಾಗೂ ಯಾವುದೇ ಸಂಘ ಸಂಸ್ಥೆಗಳಿಂದ ಸಹಾಯವಿಲ್ಲದೆ, ನಿರಂತರವಾಗಿ ಬೇಸಿಗೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ, ಪಶು ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. 2011 ರಲ್ಲಿ ಭಾರತೀಯ ಸಂರಕ್ಷಣಾವಾದಿ ಮೊಹಮ್ಮದ್ ದಿಲಾವರ್ ಅವರು ನೇಚರ್ ಫಾರೇವರ್ ಸೊಸೈಟಿ ಆರಂಭಿಸಿ, ಪಕ್ಷಿಗಳ ಕಾಳಜಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಯೋಗ ಮೇಲ್ವಿಚಾರಕ ಗಂಗಪ್ಪ ಸಾವಳೆ, ನಿವೃತ್ತ ಮುಖ್ಯೋಪಾಧ್ಯಾಯ ನಿಜಲಿಂಗಪ್ಪ ತಗಾರೆ, ವೀರಶೆಟ್ಟಿ, ಅಶೋಕ್, ಸಂಜೀವಕುಮಾರ್, ಶೀಲವಂತ್, ಈಶ್ವರ್ ಕನೇರಿ, ಕಿರಣ್ ಹಾಗೂ ರಾಚಯ್ಯ ಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News