ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ವಿರುದ್ಧದ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ; ವರದಿ ಸಲ್ಲಿಸದಿದ್ದಕ್ಕೆ ಜಿಲ್ಲಾಧಿಕಾರಿಗೆ ವಾರಂಟ್ ಜಾರಿ

ಶಾಸಕ ಪ್ರಭು ಚೌವ್ಹಾಣ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ : ಔರಾದ್ ಬಿಜೆಪಿ ಶಾಸಕ ಪ್ರಭು ಚೌವ್ಹಾಣ್ ವಿರುದ್ಧದ ಸರ್ಕಾರಿ ಜಮೀನು ಕಬಳಿಕೆ ಪ್ರಕರಣದ ವರದಿ ನೀಡದ ಕಾರಣಕ್ಕೆ ಬೆಂಗಳೂರಿನ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಬೀದರ್ ಜಿಲ್ಲಾಧಿಕಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ 1 ಲಕ್ಷ ರೂ. ಭದ್ರತೆಯ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲು ಆದೇಶ ಹೊರಡಿಸಿದೆ.
ಪ್ರಕರಣದ ವಿವರ : ಔರಾದ್ ಶಾಸಕ ಪ್ರಭು ಚೌವ್ಹಾಣ್ ಅವರು ನಕಲಿ ದಾಖಲೆ ಸೃಷ್ಟಿಸಿ ಬೀದರ್ ತಾಲ್ಲೂಕಿನ ಕಪಲಾಪುರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕೊಳಾರ(ಬಿ) ಗ್ರಾಮದ ಸರ್ವೇ ಸಂಖ್ಯೆ 102 ರಲ್ಲಿ ಬರುವ 3 ಎಕರೆ 19 ಗುಂಟೆ ಸರ್ಕಾರಿ ಜಮೀನು ನಕಲಿ ದಾಖಲೆ ಸೃಷ್ಟಿ ಮಾಡಿ, ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಔರಾದ್ ತಾಲ್ಲೂಕಿನ ಚಾಂದೋರಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೀಪಕ್ ಪಾಟೀಲ್ ಅವರು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಚೌವ್ಹಾ ಣ್ ಜತೆಗೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಭೂ ದಾಖಲೆಗಳ ಹೆಚ್ಚುವರಿ ನಿರ್ದೇಶಕ ಹಾಗೂ ಸಬ್ ರಿಜಿಸ್ಟ್ರಾರ್ ಅವರ ಮೇಲೂ ದಾವೆ ಹೂಡಿದ್ದರು. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಒತ್ತುವರಿಗೆ ಸಹಕಾರ ನೀಡಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದರು. ಜಮೀನು ಕಬಳಿಕೆ ಮಾಡಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಜಮೀನು ಮರಳಿ ಸರ್ಕಾರದ ಸುಪರ್ದಿಗೆ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ 2024 ರ ಅ.5 ರಂದು ದೀಪಕ್ ಪಾಟೀಲ್ ಅವರ ಹೇಳಿಕೆ ಪಡೆದಿತ್ತು. ಡಿ.12, 2024ರ ಒಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಆದೇಶಿಸಿತ್ತು. ಬಳಿಕ ವರದಿ ಸಲ್ಲಿಕೆಗೆ 2025 ರ ಫೆ.21 ರ ವರೆಗೆ ಕಾಲಾವಕಾಶ ನೀಡಿತ್ತು. ನಂತರದಲ್ಲಿ ಅದು ಮಾ.13 ರ ವರೆಗೆ ಕಾಲಾವಕಾಶ ವಿಸ್ತರಿಸಿತು.
ಆದರೂ ಕೂಡ ಜಿಲ್ಲಾಡಳಿತ ವರದಿ ಸಲ್ಲಿಸಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗೆ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲು ನ್ಯಾಯಾಲಯವು ಆದೇಶ ಹೊರಡಿಸಿದೆ.