ರೈತರಿಗೆ ಅನ್ಯಾಯವಾದರೆ ಸಹಿಸುವುದಿಲ್ಲ: ಶಾಸಕ ಪ್ರಭು ಚವ್ಹಾಣ

Update: 2024-11-08 13:52 GMT

ಪ್ರಭು ಬಿ.ಚವ್ಹಾಣ

ಬೀದರ್: ಮಾಜಿ ಸಚಿವ ಹಾಗೂ ಔರಾದ(ಬಿ) ಶಾಸಕ ಪ್ರಭು ಬಿ.ಚವ್ಹಾಣ ಅವರು ಕಮಲನಗರ ತಾಲ್ಲೂಕಿನ ಚಿಮ್ಮೇಗಾಂವ ವ್ಯಾಪ್ತಿಯಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಿಂದ ನಿರ್ಮಾಣಗೊಳ್ಳುತ್ತಿರುವ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಕೇಂದ್ರ ಸರಕಾರದ ಮೇಲೆ ಪದೇ ಪದೇ ಒತ್ತಡ ತಂದು, ನಿರಂತರ ಪ್ರಯತ್ನಪಟ್ಟು ಔರಾದ(ಬಿ) ಕ್ಷೇತ್ರಕ್ಕೆ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರ ತಂದಿದ್ದೇನೆ. ಹಿಂದೆ ಎರಡು ಸಲ ವಿಫಲವಾಗಿತ್ತು. ಪಟ್ಟು ಬಿಡದೇ ಕೇಂದ್ರ ಸಚಿವರನ್ನು ಭೇಟಿಯಾಗಿ ಯೋಜನೆ ಬರುವಂತೆ ಮಾಡಿದ್ದೇನೆ. ಕೆಲಸ ಸರಿಯಾಗಿ ನಡೆಯಬೇಕು. ಕೆಲಸಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಕೆಲಸದಲ್ಲಿ ಏನಾದರೂ ಸಮಸ್ಯೆಗಳು ಎದುರಾದರೆ ನೇರವಾಗಿ ನನ್ನನ್ನು ಭೇಟಿಯಾಗಬೇಕು. ಅದನ್ನು ಬಿಟ್ಟು ರೈತರನ್ನು ಏಕೆ ಸತಾಯಿಸುತ್ತಿದ್ದೀರಿ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕರು, ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ ಸಣ್ಣ ಪುಟ್ಟ ಕೈಗಾರಿಕೆಗಳನ್ನು ತರುವ ಸಂಕಲ್ಪ ಹೊಂದಿದ್ದು, ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಕಮಲನಗರ ತಾಲ್ಲೂಕಿಗೆ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರವನ್ನು ತರಲಾಗಿದೆ. ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಿ, ರೈತರೊಂದಿಗೆ ಸಮಾಲೋಚನೆ ನಡೆಸಿ ಜಮೀನು ಕುರಿತ ಸಮಸ್ಯೆಗಳನ್ನು ಇತ್ಯರ್ಥಪಡಿಸಿದ್ದು, ಇದೀಗ ಕೆಲಸ ಆರಂಭಗೊಂಡಿರುವುದು ಸಂತೋಷವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕಮಲನಗರ ತಹಶೀಲ್ದಾರ್ ಅಮಿತ್ ಕುಲಕರ್ಣಿ, ನಿಗಮದ ಇಂಜಿನಿಯರ್ ಶಿವರಾಜ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಅನೀಲ ಬಿರಾದಾರ, ಧನಾಜಿ ರಾಠೋಡ್, ಮಹಾದೇವ ಮಾಳಕಾರೆ, ಸಂಜು ಪಾಟೀಲ ಚಿಮ್ಮೇಗಾಂವ, ರಾಜಕುಮಾರ ಸೋನಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News