ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸಿ ಸಮುದಾಯದ ಏಳಿಗೆಗೆ ಬಳಕೆ : ಸಚಿವ ಝಮೀರ್ ಅಹ್ಮದ್

Update: 2024-06-24 14:36 GMT

ಬೀದರ್ : ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡುವ ಸಲುವಾಗಿಯೇ ಜಿಲ್ಲಾ ಮಟ್ಟದಲ್ಲಿ ʼವಕ್ಫ್ ಅದಾಲತ್ʼ ನಡೆಸಲು ತೀರ್ಮಾನಿಸಲಾಗಿದೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಸೋಮವಾರ ಬೀದರ್ ನಲ್ಲಿ ಜಿಲ್ಲಾ ವಕ್ಫ್ ಅದಾಲತ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸಾವಿರಾರು ಎಕರೆ ವಕ್ಫ್ ಆಸ್ತಿ ಒತ್ತುವರಿ ಆಗಿದ್ದು‌, ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ 386 ಎಕರೆ ಜಮೀನು ಒತ್ತುವರಿದಾರರಿಂದ ತೆರವು ಮಾಡಿ ವಶಕ್ಕೆ ಪಡೆಯಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಎಲ್ಲ ಒತ್ತುವರಿ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ವಕ್ಫ್ ಜಾಗದಲ್ಲಿ ಜಿಲ್ಲೆಗೊಂದು ಆಸ್ಪತ್ರೆ, ಕಾಲೇಜು ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ವಕ್ಫ್ ಆಸ್ತಿ ದೇವರ ಆಸ್ತಿ, ಇದರ ಮೇಲೆ ಕಣ್ಣು ಹಾಕುವುದು ಅಪರಾಧ. ಯಾರೇ ಒತ್ತುವರಿ. ಮಾಡಿದ್ದರೂ ಬಿಡುವ ಪ್ರಶ್ನೆಯೆ ಇಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಬೀದರ್ ನಲ್ಲಿ ವಕ್ಫ್ ವ್ಯಾಪ್ತಿಯಲ್ಲಿ 2747 ಸಂಸ್ಥೆಗಳಿದ್ದು, 3822 ವಕ್ಫ್ ಆಸ್ತಿ ಇದೆ. ಇದರಲ್ಲಿ 13,295 ಎಕರೆ ಪೈಕಿ 275 ಎಕರೆ ಮಾತ್ರ ನಮ್ಮ ವಶದಲ್ಲಿದೆ. ಉಳಿದದ್ದು ನ್ಯಾಯಾಲಯ ದಲ್ಲಿ ಕೆಲವು ಪ್ರಕರಣ ಇದ್ದು ಒತ್ತುವರಿಯೂ ಆಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ವಕ್ಫ್ ಅದಾಲತ್ ನಡೆಸುವ ತೀರ್ಮಾನ ಕೈಗೊಂಡ ಒಂದು ವಾರದಲ್ಲಿ ಬೀದರ್ ನಲ್ಲಿ 67 ಆಸ್ತಿಗಳ ಖಾತೆ ಮಾಡಿಕೊಡಲಾಗಿದೆ. ಉಳಿದ 20 ಆಸ್ತಿಗಳ ಖಾತೆ ವಿಚಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜತೆ ಸಭೆ ನಡೆಸಲಾಗುವುದು. ವಕ್ಫ್ ಆಸ್ತಿ ಸಂರಕ್ಷಣೆಗಾಗಿ ಏಕ ರೂಪದ ಕಾಂಪೌಂಡ್ ಗೋಡೆ ನಿರ್ಮಾಣ ಹಾಗೂ ಮಾದರಿ ಶಾದಿ ಮಹಲ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾಮಾತನಾಡಿ, ಝಮೀರ್ ಅಹ್ಮದ್ ಖಾನ್ ಸಚಿವರಾದ ನಂತರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ವಕ್ಫ್ ಅದಾಲತ್ ನಡೆಸುತ್ತಿದ್ದಾರೆ. ವಕ್ಫ್ ಆಸ್ತಿ ಸಂರಕ್ಷಣೆ ನಿಟ್ಟಿನಲ್ಲಿ ಅವರ ಕಾಳಜಿ ಮೆಚ್ಚುವಂತದ್ದು. ವಕ್ಫ್ ಜಾಗದಲ್ಲಿ ಜಿಲ್ಲೆಗೊಂದು ಮಹಿಳಾ ಕಾಲೇಜು ಸ್ಥಾಪನೆ ಮಾಡಲು ತೀರ್ಮಾನ ಮಾಡಿದ್ದು ಅದರಲ್ಲಿ ಬೀದರ್ ಜಿಲ್ಲೆಯೂ ಸೇರಿದೆ ಎಂದು ತಿಳಿಸಿದರು.

ವಕ್ಫ್ ಬೋರ್ಡ್‍ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಚಿವರು ಹೆಚ್ಚು ಅನುದಾನ ಕೊಡಿಸಿದ್ದು, ಸಮುದಾಯದ ಸೇವೆಗೆ ಜಿಲ್ಲೆಗೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇಂದಿನ ಅದಾಲತ್ ನಲ್ಲಿ 178 ಅರ್ಜಿಗಳು ಬಂದಿದ್ದು, ಆ ಪೈಕಿ 50 ಅನುದಾನ ಕೋರಿ, 20 ಖಾತೆ ಸಮಸ್ಯೆ, 18 ಒತ್ತುವರಿ ಉಳಿದಂತೆ ಖಬರಸ್ಥಾನ(ಸ್ಮಶಾನ) ಅಭಿವೃದ್ಧಿಗೆ ಸಂಬಂಧ ಪಟ್ಟಿದ್ದು. ಈ ಅರ್ಜಿಗಳನ್ನು ಆದಷ್ಟು ಬೇಗ ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಬೀದರ್ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಫೈರೋಝ್ ಖಾನ್, ವಕ್ಫ್ ಬೋರ್ಡ್ ಸದಸ್ಯ ಯಾಕೂಬ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಜಿಲಾನಿ ಮೊಕಾಶಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News