ಸಂವಿಧಾನ ಉಳಿಯಬೇಕು ಎಂದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Update: 2024-02-20 18:48 GMT

ಬೀದರ್: ಈ ಬಾರಿಯ ಚುನಾವಣೆಯಲ್ಲಿ ಸಹಕಾರ ಕೊಡದೇ ಇದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ತೆಗೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಸಂವಿಧಾನ ಉಳಿಯಬೇಕು ಎಂದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಎಐಸಿಸಿ ಅಧ್ಯಕ್ಷ  ಮಲ್ಲಿಕಾರ್ಜುನ್ ಖರ್ಗೆ ಅವರು ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿಯಿಂದ ತಮ್ಮ ರಾಜಕೀಯ ಜೀವನದ ಸುವರ್ಣ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಜಾರಿಯಾದ 371(ಜೆ) ಕಲಂನ ದಶಮಾನೋತ್ಸವ ನಿಮಿತ್ಯದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಮುಂದಿನ ಪೀಳಿಗೆಯನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.

ಬಿಜೆಪಿಯೇತರ ರಾಜಕೀಯ ಪಕ್ಷದವರಿಗೆ, ಅದರಲ್ಲಿಯೂ ವಿರೋಧ ಪಕ್ಷಗಳಿಗೆ ಈಗ ಈಡಿ, ಪ್ರಧಾನಿ ನರೇಂದ್ರ ಮೋದಿ ಅವರ ಭಯವಿದೆ. ಈಡಿ ಮತ್ತು ಐಟಿ ಎರಡೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈಯಲ್ಲಿವೆ. ಹೀಗಾಗಿ ಕಾಂಗ್ರೆಸ್ಸಿನಿಂದ ಲಾಭ ಪಡೆದುಕೊಂಡು ಯಾರ ಬಳಿಯೂ ಧೈರ್ಯವಿಲ್ಲದೇ ಬಿಜೆಪಿಗೆ ಹೋಗುತ್ತಿದ್ದಾರೆ ಎಂದು ಇತ್ತೀಚೆಗೆ ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕರ ವಿರುದ್ಧ ಅವರು ಹರಿಹಾಯ್ದರು.

 ಜವಾಹರಲಾಲ್ ನೆಹರೂ ಅವರು ದೊಡ್ಡ ದೊಡ್ಡ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದ್ದರು. ಕಾಂಗ್ರೆಸ್ಸಿಗೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಕೋಟಿ ಉದ್ಯೋಗಗಳನ್ನು ಕೊಡುತ್ತೇನೆ ಎಂದು ಸುಳ್ಳು ಹೇಳಿದ್ದಾರೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ 371(ಜೆ) ಜಾರಿ ಕುರಿತು ವಿವರಿಸಿದ ಅವರು, ಯಾರಾರೋ ಏನೇನೋ ಮಾತನಾಡುತ್ತಿದ್ದಾರೆ. ಆ ಕುರಿತು ಚಳುವಳಿ ಮಾಡಿದ್ದಾರೆ ಎಂದು ಹೇಳುತ್ತಾರೆ. ಅದರ ಜಾರಿ ಕುರಿತು ಮಾತನಾಡುತ್ತಿಲ್ಲ. ಕೇವಲ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಾರೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ವಿಶೇಷ ಮೀಸಲಾತಿ ಸೌಲಭ್ಯದ ರೂಪುರೇಷೆ ಹಾಗೂ ಯೋಜನೆ ಸಿದ್ಧಪಡಿಸುವ ಕುರಿತು ಯಾರೂ ಯೋಚನೆ ಮಾಡಿರಲಿಲ್ಲ. ನಾನು ಮತ್ತು ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರು ಸೇರಿ ಆ ಕುರಿತು ನಿರ್ಧಿಷ್ಟ ರೂಪುರೇಷೆ ಸಿದ್ಧಪಡಿಸಿ, ಶ್ರೀಮತಿ ಸೋನಿಯಾಗಾಂಧಿ ಅವರ ಬೆಂಬಲದಿಂದ ಬೇರೆ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಡಾ. ಮನಮೋಹನಸಿಂಗ್ ಅವರ ನೇತೃತ್ವದಲ್ಲಿನ ಸರಕಾರವು ವಿಶೇಷ ಸೌಲಭ್ಯ ಜಾರಿಗೆ ತರುವಂತೆ ಶ್ರಮಿಸಿದೆವು ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News