ಬೀದರ್ | ಆಸ್ತಿಗಾಗಿ ನಡೆದ ಕೊಲೆಯನ್ನು ಮತಾಂತರಕ್ಕೆ ಒಪ್ಪದ ತಂದೆಯ ಕೊಲೆ ಎಂದು ಬಿಂಬಿಸಿದ ಮಾಧ್ಯಮಗಳು!
ಬೀದರ್ : ಆಸ್ತಿಯನ್ನು ಬೇರೆಯವರಿಗೆ ಬರೆದುಕೊಡಬಹುದೆಂಬ ಆತಂಕದಿಂದ ಪತ್ನಿ ಮತ್ತು ಮೂವರು ಮಕ್ಕಳು ಸೇರಿ ತಮ್ಮ ಮೂಕ ತಂದೆ ಬಸವರಾಜ್ ನರಸಪ್ಪ (52)ರನ್ನು ಮನೆಯಲ್ಲಿ ಕೊಲೆ ಮಾಡಿರುವ ಘಟನೆ ಬೀದರ್‌ನ ಮನ್ನಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾತೋಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಈ ಘಟನೆಯನ್ನು ಕೆಲವೊಂದು ಮಾಧ್ಯಮಗಳು ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಒಪ್ಪದಿದ್ದಕ್ಕೆ ಮತ್ತು ಪೂಜೆ ಏಕೆ ಮಾಡಲ್ಲ ಎಂದು ಪ್ರಶ್ನಿಸುತ್ತಿದ್ದಕ್ಕೆ ಪತ್ನಿ-ಮಕ್ಕಳು ಸೇರಿ ತಂದೆಯನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದೆ.
ಈ ಕುರಿತು ಸತ್ಯಶೋಧನೆ ನಡೆಸಿದ ʼವಾರ್ತಾ ಭಾರತಿʼ ಗೆ ಇದು ಮತಾಂತರಕ್ಕೆ ಸಂಬಂಧಿಸಿ ನಡೆದ ಕೊಲೆ ಅಲ್ಲ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ಹುಟ್ಟಿದಾಗಿನಿಂದ ಕಿವುಡ ಮತ್ತು ಮೂಕನಾಗಿದ್ದ ಬಸವರಾಜ್ ನರಸಪ್ಪ ಅವರು ಕೈ ಸನ್ನೆ ಭಾಷೆ ಬಲ್ಲವನಾಗಿದ್ದರು. ಇವರಿಗೆ ಅಡೇಮ್ಮಾ ಎಂಬವರೊಂದಿಗೆ ವಿವಾಹವಾಗಿತ್ತು. ದಂಪತಿಗೆ ರತ್ನಮ್ಮಾ, ಪ್ರಭಾಕರ್ ಹಾಗೂ ಹಣಮಂತ್ ಎಂಬ ಮೂವರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.
ಬಸವರಾಜ್ ನರಸಪ್ಪ ಅವರಿಗೆ ನಾಲ್ಕು ಸಹೋದರರು ಇದ್ದು, ತಂದೆಯ ಆಸ್ತಿಯಲ್ಲಿ ನಾಲ್ಕು ಜನರಿಗೂ ಸಮಾನವಾಗಿ ಹಂಚಿಕೆ ಆಗಿತ್ತು. ಕಿವುಡ ಮತ್ತು ಮೂಕನಾಗಿರುವ ಕಾರಣ ಈ ಆಸ್ತಿಯನ್ನು ಯಾರಾದರೂ ಬರೆಸಿಕೊಳ್ಳಬಹುದೆಂದು ಪತ್ನಿ ಮತ್ತು ಮಕ್ಕಳು ಬಸವರಾಜ್‌ರನ್ನು ಮನೆಯಿಂದ ಹೊರಗಡೆ ಹೋಗಲು ಬಿಡುತ್ತಿರಲಿಲ್ಲ ಎನ್ನಲಾಗಿದೆ.
ಹೆಂಡತಿ ಮತ್ತು ಮಕ್ಕಳ ಮಾತು ಕೆಳದೆ ಬಸವರಾಜ್ ಅವರು, ಹೊರಗಡೆ ಹೋದರೆ, ಊಟ ಕೊಡದೆ ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಶುಕ್ರವಾರ ಮನೆಗೆ ಬಂದ ಬಸವರಾಜ್ ಅವರನ್ನು ಪತ್ನಿ ಅಡೇಮ್ಮಾ, ಮಕ್ಕಳಾದ ಪ್ರಭಾಕರ್, ಹಣಮಂತ್ ಹಾಗೂ ರತ್ನಮ್ಮಾ ಸೇರಿಕೊಂಡು ಮನೆಯಲ್ಲಿ ಕೈ ಕಾಲು ಕಟ್ಟಿಹಾಕಿ ಕೊಲೆ ಮಾಡಿರುವುದಾಗಿ ಬಸವರಾಜ್ ಅವರ ಸಹೋದರ ಮಲ್ಲಿಕಾರ್ಜುನ ಎಂಬವರು ಶುಕ್ರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಕೊಲೆ ಮಾಡಿದ್ದ ಪತ್ನಿ ಸೇರಿ ಮೂವರು ಮಕ್ಕಳನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
"ಕೌಟುಂಬಿಕ ಆಸ್ತಿ ವಿಚಾರಕ್ಕಾಗಿ ನಡೆದ ಕೊಲೆಯನ್ನು ಕೆಲವರು ಮತಾಂತರಕ್ಕೆ ಒಪ್ಪದೆ ಕೊಲೆ ಆಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದೇವೆ"
ನಂದಿನಿ, ಪಿಎಸ್ಐ ಮನ್ನಳಿ ಪೊಲೀಸ್ ಠಾಣೆ ಬೀದರ್.