ಜನನಿ ಸುರಕ್ಷಾ ಯೋಜನೆ, ಮಾತೃವಂದನಾ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Update: 2025-02-08 15:56 IST
ಜನನಿ ಸುರಕ್ಷಾ ಯೋಜನೆ, ಮಾತೃವಂದನಾ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
  • whatsapp icon

ಬೀದರ್ : ಜಿಲ್ಲೆಯ ಪ್ರತಿಯೊಬ್ಬ ಮಹಿಳೆಯರು ಜನನಿ ಸುರಕ್ಷಾ ಯೋಜನೆ ಹಾಗೂ ಮಾತೃವಂದನಾ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಇಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಬೀದರ್ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಸಂಚರಿಸಿ ನವಜಾತ ಶಿಶುಗಳಿಗೆ ನೀಡುತ್ತಿರುವ ಲಸಿಕೆ ಕುರಿತು ಮಾಹಿತಿ ಪಡೆದ ಅವರು, ಜಿಲ್ಲೆಯ ಎಲ್ಲ ಹೆಣ್ಣು ಮಕ್ಕಳಲ್ಲಿ ಜನನಿ ಸುರಕ್ಷಾ ಯೋಜನೆ ಹಾಗೂ ಮಾತೃವಂದನಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿ ಗ್ರಾಮ ಪಂಚಾಯತ್, ನಗರದ ಬಡಾವಣೆಗಳಲ್ಲಿ ಈ ಕುರಿತು ವಿಶೇಷ ಅರಿವು ಜಾಥಾ ಕಾರ್ಯಕ್ರಮ ಜರುಗಿಸಬೇಕು. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರತಿ ತಿಂಗಳು ವಿಶೇಷ ಮಾಹಿತಿ ಅರಿವು ಜಾಗೃತಿ ಆಂದೋಲನಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಜನನಿ ಸುರಕ್ಷಾ ಯೋಜನೆಯಡಿ ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವ ಗ್ರಾಮೀಣ ಪ್ರದೇಶದ ಮಹಿಳೆಯ ಮೊದಲ ಹಾಗೂ ಎರಡನೇ ಹೆರಿಗೆಗೆ ತಲಾ 700 ರೂ. ಹಾಗೂ ನಗರ ಪ್ರದೇಶದ ಮಹಿಳೆಗೆ 600 ರೂ. ಖಾತೆಗೆ ಜಮೆ ಮಾಡಲಾಗುತ್ತಿದೆ. ಮಾತೃವಂದನಾ ಕಾರ್ಯಕ್ರಮದಡಿ ಮೊದಲ ಹೆರಿಗೆಗೆ ಎರಡು ಕಂತುಗಳಲ್ಲಿ 5 ಸಾವಿರ ರೂ. ಹಾಗೂ 2ನೇ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ ಒಂದೇ ಕಂತಿನಲ್ಲಿ 6 ಸಾವಿರ ರೂ. ಜಮೆಯಾಗುತ್ತದೆ ಎಂದು ಮಾಹಿತಿ ನೀಡಿದರು.

ಮಾತೃವಂದನಾ ಯೋಜನೆಯಡಿ ಮಹಿಳೆಯರು ಅಂಗನವಾಡಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ 10,629 ಮಹಿಳೆಯರು ನೋಂದಣಿಯಾಗಿದ್ದಾರೆ. ಈ ಪೈಕಿ ಪ್ರಥಮ ಬಾರಿಗೆ ಗರ್ಭಿಣಿಯಾದ 6,592 ಮಹಿಳೆಯರಿಗೆ 5 ಸಾವಿರ ರೂ. ನಂತೆ 3.29 ಕೋಟಿ ರೂ. ಹಾಗೂ ಎರಡನೇ ಹೆರಿಗೆಯಲ್ಲಿ ಹೆಣ್ಣುಮಗುವಾದ 3,298 ಫಲಾನುಭವಿಗಳಿಗೆ 6 ಸಾವಿರ ರೂ. ಗಳಂತೆ 1.97 ಕೋಟಿ ರೂ. ಅವರ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಎಲ್ಲಾ ಮಹಿಳೆಯರು ನವಜಾತ ಶಿಶುಗಳ ರೋಗ ತಡೆಗಟ್ಟಲು ಬಾಲಕ್ಷಯ, ರೋಟಾವೈರಸ್, ಅತಿಸಾರ ಭೇದಿ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ಹೆಪಟೈಟಿಸ್ ಬಿ, ನ್ಯೂಮೊಕೊಕಲ್ ಕಾಯಿಲೆ, ದಡಾರ, ರುಬೆಲ್ಲಾ, ನ್ಯೂಮೊಕೊಕಲ್ ಕಾಯಿಲೆ, ಮೆದುಳು ಜ್ವರ ಹಾಗೂ ಇರುಳು ಕುರುಡು ಈ ಎಲ್ಲಾ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News