ಅನುದಾನ ಉಪಯೋಗಿಸಿಕೊಂಡು ನೀರಿನ ಪೂರೈಕೆ ಖಚಿತ ಪಡಿಸಬೇಕು : ಸಚಿವ ಈಶ್ವರ್ ಖಂಡ್ರೆ

Update: 2025-02-27 20:06 IST
Photo of Metting
  • whatsapp icon

ಬೀದರ್ : ಜೂನ್ ಅಂತ್ಯದವರೆಗೆ ಯಾವುದೇ ಗ್ರಾಮ, ಬಡಾವಣೆ, ಜನವಸತಿ ಪ್ರದೇಶಗಳಲ್ಲಿ ನೀರಿನ ಕೊರತೆಯಾಗದಂತೆ ಸರ್ಕಾರದಿಂದಲೇ ಅಗತ್ಯ ಅನುದಾನ ಒದಗಿಸಲಾಗಿದ್ದು, ಇದನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿ ನೀರಿನ ಪೂರೈಕೆಯನ್ನು ಖಚಿತಪಡಿಸಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಭಾಲ್ಕಿಯ ತಾಲ್ಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಕಂದಾಯ, ಪಂಚಾಯತ್ ರಾಜ್, ಜೇಸ್ಕಾಂ ಮತ್ತು ಪುರಸಭೆ ಅಧಿಕಾರಿಗಳು ಜಂಟಿಯಾಗಿ ಹಳ್ಳಿ ಹಳ್ಳಿಗಳು ಪರಿಶೀಲಿಲನೆ ಮಾಡಿ ಬೇಸಿಗೆ ಮುಗಿಯುವವರೆಗೆ ನೀರಿನ ಯಾವುದೇ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಕಾರಂಜಾ ಬ್ಯಾರೇಜ್‌ನಿಂದ ಅನುಮತಿಯಿಲ್ಲದೆ ನೀರು ಬಿಡುವ ಕುರಿತು ಆಕ್ರೋಶ ಹೊರಹಾಕಿದ ಅವರು, ಈ ನಿರ್ಧಾರ ಯಾವ ಅಧಿಕಾರಿ ತೆಗೆದುಕೊಂಡಿದ್ದಾರೆ. ಯಾರ ಒತ್ತಡಕ್ಕೆ ಮಣಿದು ನೀರು ಬಿಡುಗಡೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.

ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಘಟಕದ ಸಿಬ್ಬಂದಿಗೆ ವೇತನ ಪಾವತಿಯಾಗದ ಬಗ್ಗೆ ದೂರು ಬಂದ ಹಿನ್ನೆಲೆ, ಸಿಬ್ಬಂದಿ ವೇತನ ಪಾವತಿಯಾಗದಿದ್ದರೆ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ತಕ್ಷಣವೇ ವೇತನ ಬಿಡುಗಡೆ ಮಾಡಲು ಆರೋಗ್ಯ ಇಲಾಖೆಯ ಅಧಿಕಾರಿಗೆ ಸೂಚಿಸಿ, ಮುಂದಿನ ದಿನಗಳಲ್ಲಿ ಈ ರೀತಿಯ ವಿಳಂಬ ನಡೆಯಬಾರದು ಎಂದು ಎಚ್ಚರಿಸಿದರು.

ತಾಲೂಕಿನಲ್ಲಿ ತೊಗರಿ ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ಹೆಸರು ನೋಂದಾಯಿಸಿದ ಎಲ್ಲಾ ರೈತರ ತೊಗರಿ ಖರೀದಿ ಮಾಡಬೇಕು. ತೊಗರಿ ಬೆಳೆ ಬೆಳೆದ ರೈತರಿಗೆ ಸರ್ಕಾರದ ನಿಗದಿ ಬೆಂಬಲ ಬೆಲೆ ಪೂರ್ತಿಯಾಗಿ ಲಭ್ಯವಾಗಬೇಕು ಎಂದರು.

ಈ ಬಾರಿ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಗೊಳಿಸಬೇಕು. ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಬೋಧನಾ ತರಗತಿ ಹಾಗೂ ವಿಶಿಷ್ಟ ಮಾರ್ಗಸೂಚಿ ಅನುಸರಿಸುವ ಮೂಲಕ ಫಲಿತಾಂಶ ಹೆಚ್ಚಿಸಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಣಮಂತರಾವ್ ಚವ್ಹಾಣ್‌, ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರಿ, ತಾಲ್ಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ್ ಬಿರಾದಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ ಹಾಗೂ ಡಿವೈಎಸ್ಪಿ ಶಿವಾನಂದ್ ಪವಾಡಶೆಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News