ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ : ಸಂಸದ ಸಾಗರ್ ಖಂಡ್ರೆ

Update: 2025-03-23 20:51 IST
Photo of Program
  • whatsapp icon

ಬೀದರ್ : ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮುಖ್ಯ ವಾಹಿನಿಗೆ ಬರಬೇಕು ಎಂದು ಲೋಕಸಭಾ ಸಂಸದ ಸಾಗರ್ ಖಂಡ್ರೆ ಅವರು ಹೇಳಿದರು.

ಇಂದು ನಗರದ ಪ್ರತಾಪ ನಗರದ ಸರಕಾರಿ ನೌಕರರ ಸಮುದಾಯ ಭವನದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಿಳೆಯರು ಆರ್ಥಿಕವಾಗಿ ಸಧೃಡರಾಗುವುದು ಬಹಳ ಮುಖ್ಯವಾಗಿದೆ. ಕುಟುಂಬ ಅಥವಾ ಗಂಡನಿಗೆ ಆರ್ಥಿಕವಾಗಿ ಅವಲಂಬಿತರಾಗಿದ್ದರೆ ಅವರು ಹೇಳಿದ ಹಾಗೆ ಬದುಕಬೇಕಾಗುತ್ತದೆ. ಒಂದು ವೇಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ ಸ್ವತಂತ್ರವಾಗಿ ಜೀವನ ಮಾಡಬಹುದು. ಯಾವುದೇ ಕಟ್ಟುಪಾಡುಗಳಿಗೆ ಒಳಪಡುವ ಅವಶ್ಯಕತೆ ಇರುವುದಿಲ್ಲ. ಅದಕ್ಕಾಗಿಯೇ ಕರ್ನಾಟಕದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಉಚಿತ ಬಸ್ ಸಂಚಾರ, ಮಾಸಿಕ 2 ಸಾವಿರ ರೂ. ಸಹಾಯಧನ, 10 ಕೆ.ಜಿ ಅಕ್ಕಿ, 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದಾಗಿ ಮಹಿಳೆಯರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರ್ಥಿಕ ಸ್ವಾವಲಂಬನೆ, ಉದ್ಯೋಗಾವಕಾಶ, ಉದ್ಯಮಶೀಲತೆ ಮತ್ತು ಶಿಕ್ಷಣವೇ ನಿಜವಾದ ಸಬಲೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಇಂತಹ ವಸ್ತು ಪ್ರದರ್ಶನ ಮತ್ತು ಮಾರುಕಟ್ಟೆ ಮೇಳಗಳು ಗ್ರಾಮೀಣ ಮಹಿಳೆಯರಿಗೆ ತಮ್ಮ ಉತ್ಪನ್ನಗಳನ್ನು ಪ್ರಚಾರ ಮತ್ತು ಮಾರಾಟ ಮಾಡಲು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರಿಗೆ ಉನ್ನತವಾದ ಸ್ಥಾನಮಾನ ನೀಡಲಾಗಿದೆ. ಹೆಣ್ಣನ್ನು ದೇವರು ಎಂದು ಪೂಜಿಸುವ ಏಕೈಕ ದೇಶ ನಮ್ಮದಾಗಿದ್ದು, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಗಳು, ಗ್ರಾಮೀಣ ಬಡ ಕುಟುಂಬಗಳ ಬಡತನ ನಿವಾರಣೆಯ ಉದ್ದೇಶ ಹೊಂದಿದೆ. ಈ ಯೋಜನೆಯು ಅವರಿಗೆ ಲಾಭದಾಯಕ ಸ್ವ ಉದ್ಯೋಗ ಮತ್ತು ನುರಿತ ವೇತನ ಉದ್ಯೋಗಾವಕಾಶ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಪ್ರತಿಯೊಬ್ಬ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅವರು ಮಾತನಾಡಿ, ಮಹಿಳೆಯರನ್ನು ಸಬಲೀಕರಣ ಮತ್ತು ಸಶಕ್ತಿಕರಣಗೊಳಿಸಲು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಅಂತಹ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಗ್ರಾಮೀಣ ಮಹಿಳಾ ಸ್ವಸಹಾಯ ಸಂಘ, ಮಹಿಳಾ ಉತ್ಪಾದಕ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ 2 ಅಕ್ಕ ಕೆಫೆ ಪ್ರಾರಂಭವಾಗಲಿವೆ. ಇವು ಸಂಪೂರ್ಣವಾಗಿ ಮಹಿಳೆಯರಿಂದ ಕಾರ್ಯ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೊಡೆ, ಬೀದರ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ, ಜಿಲ್ಲಾ ಯೋಜನಾ ನಿರ್ದೇಶಕ ಜಗನ್ನಾಥ್ ಮೂರ್ತಿ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣಾ, ರಜಿಯಾ ಬಳಬಟ್ಟಿ ಹಾಗೂ ಗೀತಾವಾಣಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News