ʼಜಾತಿಗಣತಿ ವರದಿʼ ಬಗ್ಗೆ ಚರ್ಚೆಯಾಗದಿದ್ದರೆ ಸರಕಾರದ ಮೇಲೆ ಆಪಾದನೆ ಬರುತ್ತದೆ : ಜಿ.ಪರಮೇಶ್ವರ್
ಬೆಂಗಳೂರು: ʼಜಾತಿಗಣತಿ ವರದಿಯಲ್ಲಿ ಏನು ಬಂದಿದೆ ಎಂಬುದು ಜನಸಮುದಾಯಕ್ಕೆ ಗೊತ್ತಾಗಬೇಕು. ಈ ಬಗ್ಗೆ ಚರ್ಚೆಯಾಗದಿದ್ದರೆ, ವರದಿಯನ್ನೇ ಮುಚ್ಚಿಹಾಕಿದರು ಎಂಬ ಆಪಾದನೆಗಳು ಸರಕಾರದ ಮೇಲೆ ಬರುತ್ತವೆʼ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ಮಂಗಳವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಜಾತಿಗಣತಿ ವರದಿಯನ್ನು ಸಚಿವ ಸಂಪುಟದ ಮುಂದೆ ತಂದು, ಸಾಧಕ-ಬಾಧಕಗಳನ್ನು ಚರ್ಚಿಸಲಾಗುವುದು. ತದನಂತರ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆʼ ಎಂದರು.
ಜಾತಿಗಣತಿ ವರದಿಗೆ 160 ಕೋಟಿ ರೂ. ಖರ್ಚು ಮಾಡಿ, ಜನಸಮುದಾಯದ ಮುಂದೆ ಇಡದೇ ಹೋದರೆ ಅಷ್ಟು ಹಣ ಖರ್ಚು ಮಾಡಿರುವುದಕ್ಕೆ ಅರ್ಥ ಇರುವುದಿಲ್ಲ. ವರದಿಯಲ್ಲಿ ಏನು ಬಂದಿದೆ ಎಂಬುದರ ಕುರಿತಾದರೂ ಜನರಿಗೆ ಗೊತ್ತಾಗಬೇಕು ಎಂದು ಹೇಳಿದರು.
ʼಜಾತಿಗಣತಿ ವರದಿ ಜಾರಿ ಮಾಡುವುದು ಬೇರೆ ವಿಚಾರ. ಅದರ ಮಾಹಿತಿ ಹೊರಗಡೆ ಬರಬೇಕಲ್ಲವೇ? ಜಾರಿ ಮಾಡಲು ಆಗುವ ತೀರ್ಮಾನಗಳು ಬೇರೆಬೇರೆ ರೀತಿಯಲ್ಲಿ ಆನಂತರ ಆಗುತ್ತವೆ. ಯಾರು ಕೂಡ ಇದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲʼ ಎಂದರು
ಪಂಚಮಸಾಲಿ, ಒಳಮೀಸಲಾತಿ ಕುರಿತು ಪ್ರತಿಕ್ರಿಯಿಸಿ, ʼಎಲ್ಲವನ್ನು ನಿಭಾಯಿಸುವ ಸಾಮರ್ಥ್ಯ ಕಾಂಗ್ರೆಸ್ ಸರಕಾರಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ. ನಾವೆಲ್ಲರು ಸಹ ಜನಸಮುದಾಯದ ವಿಚಾರಧಾರೆಗಳನ್ನು ಯಾವ ರೀತಿ ತೀರ್ಮಾನ ಮಾಡಬೇಕು ಎಂಬುದರ ಕುರಿತು ಚರ್ಚೆ ಮಾಡಿ, ತೀರ್ಮಾನ ಕೈಗೊಳ್ಳುತ್ತೇವೆʼ ಎಂದರು.
ಮೀಸಲಾತಿ ಶೇ.50 ಮೀರಿ ಹೋಗಬಾರದು ಎಂಬ ಆದೇಶವಿದೆ. ಕೆಲ ರಾಜ್ಯಗಳಲ್ಲಿ ಶೇ.50ರಷ್ಟು ಮೀರಿ ಹೋಗಿದ್ದಾರೆ. ತಮಿಳುನಾಡಿನವರು ಶೇ.69 ಮೀಸಲಾತಿಯನ್ನು ಕಾನೂನಾತ್ಮಕವಾಗಿ ಮಾಡಿದ್ದಾರೆ. ಸಂವಿಧಾನದ ಶೆಡ್ಯೂಲ್ಡ್ 9ಕ್ಕೆ ಸೇರಿಸಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಸಹ ಬೇರೆಬೇರೆ ಸಮುದಾಯಗಳು ಮೀಸಲಾತಿ ಕೇಳುತ್ತಿದ್ದಾರೆ. ಅದನ್ನೆಲ್ಲ ಮಾಡಬೇಕಾದರೆ ಶೇ.50ರಷ್ಟು ಮೀರಿ ಹೋಗಬೇಕಾಗುತ್ತದೆʼ ಎಂದು ಹೇಳಿದರು.
ಸಿ.ಪಿ.ಯೋಗೇಶ್ವರ್ ನನಗೆ ಆತ್ಮೀಯ ಸ್ನೇಹಿತ:
ಸಿ.ಪಿ.ಯೋಗೇಶ್ವರ್ ಪಕ್ಷಕ್ಕೆ ಬರುವ ವಿಚಾರ ಮಾಹಿತಿ ನನಗೆ ಇಲ್ಲ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ರಣನೀತಿ ಮಾಡುತ್ತಿದ್ದೇವೆ. ಸಿ.ಪಿ.ಯೋಗೇಶ್ವರ್ ನನಗೆ ಆತ್ಮೀಯ ಸ್ನೇಹಿತ. ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಅವರು ಪಕ್ಷ ಸೇರ್ಪಡೆ ಆಗುವುದು ಕೆಪಿಸಿಸಿ ಅಧ್ಯಕ್ಷರು ಮತ್ತು ಹೈಕಮಾಂಡ್‌ಗೆ ಬಿಟ್ಟಿರುವ ವಿಚಾರ. ಡಿ.ಕೆ.ಸುರೇಶ್ ಅವರಿಗೆ ಸ್ಪರ್ಧಿಸುವಂತೆ ನಾವೆಲ್ಲ ಒತ್ತಾಯಿಸಿದ್ದೇವೆ. ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡುತ್ತದೆ ಎಂಬುದನ್ನು ನೋಡಬೇಕು ಎಂದು ಹೇಳಿದರು.