ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಪ್ರಾರಂಭಿಸಿದೆ: ಪ್ರಿಯಾಂಕ್ ಖರ್ಗೆ

Update: 2023-06-21 07:29 GMT

ಕಲಬುರಗಿ: ಕೇಂದ್ರ ಸರ್ಕಾರ ರಾಜ್ಯದ ವಿರುದ್ದ ದ್ವೇಷದ ರಾಜಕಾರಣ ಪ್ರಾರಂಭಿಸಿದ್ದು ಅನ್ನ ಭಾಗ್ಯ ಯೋಜನೆ ಜಾರಿಗೊಳಿಸದಂತೆ ಷಡ್ಯಂತ್ರ ರೂಪಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಿಗರ ಆಸ್ಮಿತೆಗೆ ಧಕ್ಕೆಯಾಗುತ್ತಿರುವುದಕ್ಕೆ, ನಿರುದ್ಯೋಗ ಸಮಸ್ಯೆ ಹೆಚ್ಚಿರುವುದಕ್ಕೆ ರಾಜ್ಯದ ಕನ್ನಡಗಿರು ಬಿಜೆಪಿ ವಿರುದ್ದ ಸಿಡಿದೆದ್ದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಇದನ್ನು ಸಹಿಸಿಕೊಳ್ಳಲು ಆಗದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ವಿರುದ್ಧ ದ್ವೇಷದ ರಾಜಕಾರಣ ಪ್ರಾರಂಭಿಸಿದೆ ಎಂದರು.

ರಾಜ್ಯ ಸರ್ಕಾರದ ವತಿಯಿಂದ 5 ಕೆಜಿ ಹಾಗೂ ಕೇಂದ್ರದಿಂದ 5 ಕೆಜಿ ಸೇರಿ ಒಟ್ಟು 10 ಕೆಜಿ ಅಕ್ಕಿಯನ್ನು ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಜನರಿಗೆ ವಿತರಿಸುವುದಾಗಿ ಸಿಎಂ ಜೂನ್ 2 ರಂದು ಹೇಳಿದ್ದರು. ಅದರಂತೆ ಭಾರತೀಯ ಆಹಾರ ನಿಗಮಕ್ಕೆ (Food Corporation of India ) ಗೆ ಪತ್ರ ಬರೆದು 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಕೋರಿದ್ದರು. ಆಗ ಉತ್ತರಿಸಿದ ಎಫ್ ಸಿ ಐ ಜೂನ್ 12 ರಂದು ಪತ್ರ ಬರೆದು ಪ್ರತಿ ಕ್ವಿಂಟಾಲ್ ಗೆ ರೂ 3400 ರಂತೆ 2.08 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿಗೆ ಸೂಚಿಸಿತ್ತು.ಆದರೆ ಅಚ್ಚರಿಯಂತೆ, ಕೇಂದ್ರ ಆಹಾರ ಸರಬರಾಜು ಹಾಗೂ ಸಾರ್ವಜನಿಕ ವಿತರಣಾ ಇಲಾಖೆಯ ಅಣತಿಯಂತೆ ಎಫ್ ಸಿ ಐ ಜೂನ್ 13 ರಂದು ಪತ್ರ ಬರೆದು ಅಕ್ಕಿ ಸರಬರಾಜು ಮಾಡಲು ನಿರಾಕರಿಸಿದೆ. ಎಫ್ ಸಿ ಐ ನಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದ್ದು, ಖಾಸಗಿಯವರಿಗೆ ಸರಬರಾಜು ಮಾಡಲು ಸಿದ್ಧರಿದ್ದರೂ ಕೂಡಾ ರಾಜ್ಯಕ್ಕೆ ಅಕ್ಕಿ ಸರಬರಾಜು ಮಾಡಲು ನಿರಾಕರಿಸಿರುವುದು ಗಮನಿಸಿದರೆ ಕೇಂದ್ರಕ್ಕೆ ಕನ್ನಡಿಗರ ಹಿತಾಸಕ್ತಿ ಕಾಪಾಡುವುದು ಬೇಕಿಲ್ಲ, ಹಾಗೂ ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುವುದು ಬೇಕಿಲ್ಲ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಮೇರಿಕಾ ಹಾಗೂ ಯೂರೋಪ್ ದೇಶಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವುದಾಗಿ ಹೇಳಿದ್ದಾರೆ. ಇದು ದೇಶದ್ರೋಹವಲ್ಲವೇ? ಎಂದು ಪ್ರಶ್ನಿಸಿದರು.

ಜುಲೈ 1 ರಂದು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡುವುದಿಲ್ಲವೇ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಛತ್ತೀಸ್ಗಡ್ ರಾಜ್ಯವನ್ನು ಸಂಪರ್ಕಸಲಾಗಿದ್ದು, ಅವರು 1.50 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸರಬರಾಜು ಮಾಡಲು ಒಪ್ಪಿದ್ದಾರೆ. ಹಾಗಾಗಿ ಯೋಜನೆ ಜಾರಿಗೊಳಿಸುತ್ತೇವೆ. ಆದರೆ ಜುಲೈ 1 ರಂದು ಜಾರಿಗೆ ತರಬೇಕೆಂದರೆ ಮೋದಿ ಮನಸು ಮಾಡಿ ರಾಜ್ಯದ ಜನರು ಮತ ಹಾಕದಿದ್ದರೂ ಪರವಾಗಿಲ್ಲ ಎಂದು ಅಕ್ಕಿ ಸರಬರಾಜು ಮಾಡಿದರೆ ಸಾಧ್ಯವಾಗುತ್ತದೆ ಎಂದರು.















ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣಪ್ರಕಾಶ ಪಾಟೀಲ, ಶಾಸಕರಾದ ಕನೀಜ್ ಫಾತೀಮಾ, ಅಲ್ಲಮಪ್ರಭು ಪಾಟೀಲ, ಬಿ.ಆರ್. ಪಾಟೀಲ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಡೇವಿಡ್ ಸಿಮೆಯೋನ್, ಸುಭಾಷ ರಾಠೋಡ, ಶಿವಾನಂದ ಪಾಟೀಲ ಸೇರಿದಂತೆ ಮತ್ತಿತರಿದ್ದರು.



ಕಲಬುರಗಿ ಯಲ್ಲಿ ಇಂದು ಸಚಿವದ್ವಯರಾದ ಪ್ರಿಯಾಂಕ್ ಖರ್ಗೆ ಹಾಗೂ ಡಾ ಶರಣಪ್ರಕಾಶ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಕೇಂದ್ರದ ಧೋರಣೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor


Similar News