ಚಿಕ್ಕಮಗಳೂರು | ವೈದ್ಯ ನೀಡಿದ ಚುಚ್ಚುಮದ್ದಿನಿಂದ ಬಾಲಕ ಮೃತ್ಯು ಆರೋಪ : ದೂರು ದಾಖಲು

Update: 2024-09-28 14:42 GMT

ಸೋನೇಶ್(7)

ಚಿಕ್ಕಮಗಳೂರು : ತೀವ್ರ ಜ್ವರದಿಂದ ಬಳಲುತ್ತಿದ್ದ 7 ವರ್ಷದ ಬಾಲಕನೋರ್ವನಿಗೆ ಖಾಸಗಿ ಕ್ಲಿನಿಕ್‍ನ ವೈದ್ಯರೊಬ್ಬರು ಚುಚ್ಚುಮದ್ದು ನೀಡಿದ ಬಳಿಕ ತೀವ್ರ ಅಸ್ವಸ್ಥನಾಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.

ಅಜ್ಜಂಪುರ ಪಟ್ಟಣದ 7 ವರ್ಷದ ಸೋನೇಶ್ ಮೃತ ಬಾಲಕ. ಕಳೆದ 4 ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮಗನನ್ನು ಪೋಷಕರು ಶನಿವಾರ ಅಜ್ಜಂಪುರ ಪಟ್ಟಣದ ಖಾಸಗಿ ಕ್ಲಿನಿಕ್‍ಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಬಾಲಕನನ್ನು ಪರೀಕ್ಷಿಸಿದ ವೈದ್ಯ ಚುಚ್ಚುಮದ್ದು ನೀಡಿ ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

ಆದರೆ ಬಾಲಕನಿಗೆ ವೈದ್ಯ ಚುಚ್ಚು ಮದ್ದು ನೀಡಿದ್ದ ಜಾಗದಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದು, ನೋವಿನಿಂದಾಗಿ ಬಾಲಕ ಮತ್ತಷ್ಟು ಅಸ್ವಸ್ಥನಾಗಿದ್ದಾನೆ. ಇದರಿಂದ ಭೀತಿಗೊಳಗಾದ ಪೋಷಕರು ಬಾಲಕನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಘಟನೆ ಸಂಬಂಧ ಪೋಷಕರು ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ವೈದ್ಯ ತಲೆಮರೆಸಿಕೊಂಡಿದ್ದಾನೆಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News