ಚಿಕ್ಕಮಗಳೂರು | ಒಂಟಿ ಸಲಗದ ಕಳೇಬರ ಪತ್ತೆ ; ವಿದ್ಯುತ್ ಪ್ರವಹಿಸಿ ಸಾವು ಶಂಕೆ
ಚಿಕ್ಕಮಗಳೂರು : ಆಹಾರ ಅರಸಿ ಕಾಫಿತೋಟಕ್ಕೆ ಬಂದಿದ್ದ ಕಾಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಆಲ್ದೂರು ಹೋಬಳಿಯ ಕಂಚಿಕಲ್ಲುದುರ್ಗಾ ಗ್ರಾಮದಲ್ಲಿರುವ ಕಾಫಿ ಎಸ್ಟೇಟ್‍ವೊಂದರಲ್ಲಿ ರವಿವಾರ ವರದಿಯಾಗಿದೆ.
ಆಲ್ದೂರು ಹೋಬಳಿಯ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಂಚಿಕಲ್ಲುದುರ್ಗಾ ಗ್ರಾಮದ ಸಂದೀಪ್ ಎಂಬವರ ಕೆರೆಹಕ್ಲು ಕಾಫಿ ಎಸ್ಟೇಟ್‍ನಲ್ಲಿ ಒಂಟಿ ಸಲಗದ ಕಳೇಬರ ಪತ್ತೆಯಾಗಿದ್ದು, ಕಾಡಾನೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಶನಿವಾರ ಮಧ್ಯರಾತ್ರಿ ಈ ಕಾಡಾನೆ ಕಂಚಿಕಲ್ಲುದುರ್ಗದತ್ತ ಬಂದಿದ್ದು, ಮುಂಜಾನೆ ಕೆರೆಹಕ್ಲು ಕಾಫಿ ಎಸ್ಟೇಟ್ ಪ್ರವೇಶಿಸಿದೆ. ಈ ವೇಳೆ ಎಸ್ಟೇಟ್ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿ ಪಕ್ಕದಲ್ಲೇ ಇದ್ದ ಹಲಸಿನ ಮರದ ಬಳಿ ಕಾಡಾನೆ ಕಳೇಬರ ಕಂಡು ಬಂದಿದ್ದು, ಹಲಸಿನ ಮರದಲ್ಲಿದ್ದ ಹಲಸಿನಹಣ್ಣು ಕೀಳಲು ಆನೆ ಪ್ರಯತ್ನಿಸಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಹಲಸಿನ ಮರದ ಕೊಂಬೆ ತಾಗಿ ಆನೆಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.
ರವಿವಾರ ಎಸ್ಟೇಟ್‍ನ ಕಾರ್ಮಿಕರು ಆನೆಯ ಕಳೇಬರ ಕಂಡು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಇಲಾಖಾಧಿಕಾರಿಗಳು, ಸಿಬ್ಬಂದಿ ಸ್ಥಳದಲ್ಲಿ ಪರಿಶೀಲನೆ ನಡೆಸಿ ಆನೆಯ ಕಳೇಬರದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕಾಡಾನೆ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ರವಿವಾರ ಮೃತಪಟ್ಟ ಕಾಡಾನೆಯ ಮರಣೋತ್ತರ ಪರೀಕ್ಷೆ ಬಳಿಕ ಸೋಮವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಆಲ್ದೂರು ವಲಯ ಅರಣ್ಯಧಿಕಾರಿ ಹರೀಶ್ ತಿಳಿಸಿದ್ದಾರೆ.