ಚಿಕ್ಕಮಗಳೂರು | ಬಾಯ್ಲರ್ ರಿಪೇರಿ ವೇಳೆ ಅವಘಡ : ಶಾಖದ ತೀವ್ರತೆಗೆ ಸುಟ್ಟು ಕರಕಲಾದ ಕಾರ್ಮಿಕ
ಚಿಕ್ಕಮಗಳೂರು : ಬಾಯ್ಲರ್ ರಿಪೇರಿ ಮಾಡುತ್ತಿದ್ದ ವೇಳೆ ಏಕಾಏಕಿ ಹೊರಹೊಮ್ಮಿದ ಶಾಖದಿಂದಾಗಿ ಕಾರ್ಮಿಕನ ದೇಹ ಸುಟ್ಟು ಹೋಗಿ ಮೃತಪಟ್ಟಿರುವ ಘಟನೆ ಶನಿವಾರ ನಗರ ಸಮೀಪದ ಕರುಬರಹಳ್ಳಿ ಗ್ರಾಮದಲ್ಲಿರುವ ಕಾಫಿ ಕ್ಯೂರಿಂಗ್‍ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತ ಕಾರ್ಮಿಕನನ್ನು ಮಡಿಕೇರಿ ಮೂಲದ ಉದಯ್(27) ಎಂದು ಗುರುತಿಸಲಾಗಿದ್ದು, ಈತ ಶನಿವಾರ ಕುರುಬರಹಳ್ಳಿಯಲ್ಲಿರುವ ವಿದ್ಯಾ ಕಾಫಿ ಕ್ಯೂರಿಂಗ್ ವರ್ಕ್ಸ್‌ನಲ್ಲಿ ಕೆಟ್ಟು ಹೋಗಿದ್ದ ಬಾಯ್ಲರ್ ರಿಪೇರಿಗೆ ಮಡಿಕೇರಿಗೆ ಬಂದಿದ್ದ. ಬಾಯ್ಲರ್ ರಿಪೇರಿಗೆ ಮುಂದಾಗಿದ್ದ ವೇಳೆ ಬಾಯ್ಲರ್ ನ ಮುಚ್ಚಳವನ್ನು ತೆರೆಯುತ್ತಿದ್ದಂತೆ ಏಕಾಏಕಿ 340 ಡಿಗ್ರಿ ಸೆಲ್ಸಿಯಸ್‍ನಷ್ಟು ಶಾಖ ಬಾಯ್ಲರ್ ನಿಂದ ದಿಢೀರ್ ಹೊರಹೊಮ್ಮಿದೆ. ಈ ವೇಳೆ ಬಾಯ್ಲರ್ ಎದುರಲ್ಲೇ ಇದ್ದ ಉದಯ್ ಮುಖ, ಕೈ, ಎದೆ ಸುಟ್ಟು ಕರಕಲಾಗಿದೆ. ಕೂಡಲೇ ಕಾರ್ಮಿಕನನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಕಾರ್ಮಿಕನ ಮೃತದೇಹವನ್ನು ನಗರದ ಮಲ್ಲೇಗೌಡ ಸರಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಕಾರ್ಮಿಕನ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮುಂಜಾಗ್ರತಾ ಕ್ರಮವಹಿಸದೇ ಬಾಯ್ಲರ್ ರಿಪೇರಿಗೆ ಮುಂದಾಗಿದ್ದೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.