ಚಿಕ್ಕಮಗಳೂರು | ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು: ಆರೋಪ

Update: 2024-01-27 18:05 GMT

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿಯೇ ಗರ್ಭಿಣಿ ಹೊಟ್ಟೆಯಲ್ಲೆ ಮಗು ಮರಣ ಹೊಂದಿದೆ ಎಂದು ಆರೋಪಿಸಿ ಗರ್ಭಿಣಿಯ ಕುಟುಂಬಸ್ಥರು ನಗರದ ಹೆರಿಗೆ ಆಸ್ಪತ್ರೆ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.

ಕಡೂರು ತಾಲೂಕು ಸಖರಾಯಪಟ್ಟಣದ ಮಡಿಕೆ ಹೊಸಳ್ಳಿ ಗ್ರಾಮದ ಗರ್ಭಿಣಿ ಶಿಲ್ಪಾ ಚಿಕ್ಕಮಗಳೂರು ನಗರದ ಹೆರಿಗೆ ಆಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದು,  ಹೊಟ್ಟೆಯಲ್ಲಿ ಮಗುವಿನ ಬೆಳವಣಿಗೆ ಆಗಿಲ್ಲ ಎಂದು ಹೇಳಿದ್ದರು. ಶನಿವಾರ ಹೊಟ್ಟೆ ನೋವು ತೀವ್ರಗೊಂಡಿದ್ದರಿಂದ ವೈದ್ಯರು ಹೆರಿಗೆ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ಮಗು ಗರ್ಭಿಣಿ ಹೊಟ್ಟೆಯಲ್ಲಿ ಮೃತಪಟ್ಟಿದೆ. ನಿರ್ಲಕ್ಷ್ಯವಹಿಸಿದ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದರು.

ಗರ್ಭಿಣಿ ಶಿಲ್ಪಾ ಶುಕ್ರವಾರ ಬೆಳಗ್ಗೆಯೇ ಆಸ್ಪತ್ರೆಗೆ ದಾಖಲಾಗಿದ್ದರೂ ಸಂಜೆ ವೇಳೆಗೆ ಆಗಮಿಸಿದ ವೈದ್ಯರು ಮಗು ಬೆಳವಣಿಗೆಯಾಗಿಲ್ಲ. ಆದ್ದರಿಂದ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೆರಿಗೆ ಮಾಡಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಶಿಲ್ಪಾ ತಾಯಿ ಇಂದಿರಮ್ಮ ಆರೋಪಿಸಿದ್ದಾರೆ.

ಶನಿವಾರ ಮುಂಜಾನೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದಾಗ ಮಗು ಹೊಟ್ಟೆಯಲ್ಲೆ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡದಿರುವುದರಿಂದ ಮಗು ಮೃತಪಟ್ಟಿದೆ. ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯತನದಿಂದ ಮಗು ಮೃತಪಟ್ಟಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಎದುರು ಕುಟುಂಬಸ್ಥರು ಆಗ್ರಹಿಸಿದ್ದಲ್ಲದೇ ವೈದ್ಯರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆ ಸಂಬಂಧಿಕರು ಆಸ್ಪತ್ರೆ ಆವರಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರ ಠಾಣೆ ಪೊಲೀಸರನ್ನು ಆಸ್ಪತ್ರೆ ಎದುರು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News