ಚಿಕ್ಕಮಗಳೂರು | ಎತ್ತಿನಭುಜ, ಮುಳ್ಳಯ್ಯನಗಿರಿ ಚಾರಣ ನಿಷೇಧಿಸಿ ಜಿಲ್ಲಾಡಳಿತ ಆದೇಶ

Update: 2024-06-22 15:41 GMT

ಚಿಕ್ಕಮಗಳೂರು : ಸರಣಿ ರಜೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಹಾಗೂ ಮೂಡಿಗೆರೆ ತಾಲೂಕಿನ ಎತ್ತಿನಭುಜ ಪ್ರವಾಸಿ ತಾಣಗಳ ಚಾರಣ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಪ್ರವಾಸಿ ತಾಣಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಿದ್ದು, ಇದರಿಂದ ಪ್ರವಾಸಿ ತಾಣಗಳಲ್ಲಿ ಜನ ಹಾಗೂ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ವಾಹನ, ಜನದಟ್ಟಣೆ ನಿಯಂತ್ರಿಸಲು ರಾಜ್ಯ ಸರಕಾರ ಆನ್‍ಲೈನ್ ಮೂಲಕ ಚಾರಣ, ಪ್ರವಾಸಕ್ಕೆ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಈ ಸಂಬಂಧ ಕಳೆದ ಸಾಲಿನಲ್ಲೇ ಸರಕಾರ ಆದೇಶಿಸಿದ್ದು, ಆನ್‍ಲೈನ್ ಬುಕ್ಕಿಂಗ್ ವ್ಯವಸ್ಥೆ ಆರಂಭವಾಗುವವರೆಗೂ ಚಾರಣ ನಿಷೇಧಿಸಿ ಆದೇಶಿಸಿತ್ತು.

ಈ ನಿಷೇಧದ ಹೊರತಾಗಿಯೂ ಸದ್ಯ ಸರಣಿ ರಜೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು, ಚಾರಣಿಗರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಹಾಗೂ ಮೂಡಿಗೆರೆ ತಾಲೂಕಿನ ಎತ್ತಿನಭುಜ ಪ್ರವಾಸಿ ತಾಣಗಳಿಗೆ ಚಾರಣ ನಿಷೇಧಿಸಿ ಆದೇಶಿಸಿದೆ. ಎತ್ತಿನಭುಜ ಪ್ರವಾಸಿ ತಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದು, ಮೂಲಸೌಕರ್ಯ ಕಲ್ಪಿಸುವ ಕೆಲಸ ಆರಂಭಿಸಲಾಗಿದೆ. ಮೂಲಸೌಕರ್ಯ ಒದಗಿಸಿದ ಬಳಿಕ ಚಾರಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದ್ದು, ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ವಾಹನ, ಜನದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಚಾರಣ ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News