ಚಿಕ್ಕಮಗಳೂರು ಬಿಡುವು ನೀಡಿದ ಮಳೆ : ಸಹಜ ಸ್ಥಿತಿಯತ್ತ ಜನಜೀವನ

Update: 2024-07-20 17:04 GMT

ಚಿಕ್ಕಮಗಳೂರು : ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆರ್ಭಟಿಸಿದ್ದ ಮಳೆ ಶನಿವಾರ ಕೊಂಚ ಬಿಡುವು ನೀಡಿದೆ. ಮಳೆ ಕಡಿಮೆಯಾದರೂ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ನದಿಗಳ ನೆರೆ ನೀರಿನಿಂದಾಗಿ ಅಲ್ಲಲ್ಲಿ ಅವಾಂತರಗಳ ಸರಣಿ ಮುಂದುವರಿದಿದೆ. ಮನೆ, ಮರ, ಭೂಕುಸಿತದಂತಹ ಘಟನೆಗಳು ಮಲೆನಾಡು ಭಾಗದ ಅಲ್ಲಲ್ಲಿ ವರದಿಯಾಗುತ್ತಲೇ ಇವೆ.

ಕಳೆದೊಂದು ವಾರದಿಂದ ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಭಾರೀ ಮಳೆಯಿಂದಾಗಿ ಹಲವಾರು ಮನೆಗಳು ಧರೆಗುರುಳಿದಿದ್ದರೆ, 5ಕ್ಕೂ ಹೆಚ್ಚು ಜಾನುವಾರುಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಮರಗಳು ಉರುಳಿ ನೂರಾರು ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದವು. ರಸ್ತೆ, ಮೋರಿ, ಸೇತುವೆಗಳ ಮೇಲೆ ನೆರೆ ನೀರು ಹರಿದು, ಭೂ ಕುಸಿತ ಉಂಟಾಗಿ ಸಂಪರ್ಕಗಳೇ ಕಡಿತಗೊಂಡಿದ್ದವು. ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಕಳೆದೊಂದು ವಾರದಿಂದ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆ ಶನಿವಾರ ಕೊಂಚ ಬಿಡುವು ನೀಡಿದ್ದರೂ ಮಲೆನಾಡು ಭಾಗದಲ್ಲಿ ಆಗಾಗ್ಗೆ ಭಾರೀ ಗಾಳಿಯೊಂದಿಗೆ ಸಾಧಾರಣ ಮಳೆಯಾಗುತ್ತಿದೆ. ಮಳೆ ಕೊಂಚು ಕಡಿಮೆಯಾಗಿರುವುದರಿಂದ ಮಲೆನಾಡು ಭಾಗದ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಸದ್ಯ ಮಳೆ ಕಡಿಮೆಯಾಗಿದ್ದರೂ ತುಂಬಿ ಹರಿಯುತ್ತಿರುವ ಹೇಮಾವತಿ, ಭದ್ರಾ, ತುಂಗಾ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಮುಂದುವರಿದಿದೆ. ನದಿಗಳ ತೀರದಲ್ಲಿರುವ ಗ್ರಾಮಗಳಲ್ಲಿ ಬಾಳೆ, ಕಾಫಿ, ಅಡಿಕೆ ತೋಟಗಳಿಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಶನಿವಾರ ಬೆಳಗ್ಗೆ ಶೃಂಗೇರಿ-ಮಂಗಳೂರು ಹೆದ್ದಾರಿ ಬಳಿ ಭೂಕುಸಿತ ಉಂಟಾಗಿದ್ದು, ಭಾರೀ ಪ್ರಮಾಣದಲ್ಲಿ ಮಣ್ಣು ಹಾಗೂ ಬಂಡೆ ಕಲ್ಲುಗಳು, ಮರಗಳು ರಸ್ತೆ ಮೇಲೆ ಬಿದ್ದಿದ್ದು, ಪರಿಣಾಮ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಹೆದ್ದಾರಿಯಲ್ಲಿ ನದಿ ತೀರದಲ್ಲಿ 50ಅಡಿ ಉದ್ದದ ಬಿರುಕು ಕಾಣಿಸಿಕೊಂಡಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ತಾಲೂಕಿನಾದ್ಯಂತ ಶನಿವಾರ ಅಗಾಗ್ಗೆ ಭಾರೀ ಮಳೆಯಾಗಿದ್ದು, ಇದರಿಂದಾಗಿ ಶೃಂಗೇರಿಗೆ ಬಂದಿದ್ದ ಪ್ರವಾಸಿಗರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಮೇಲ್‍ನೆಮ್ಮಾರು ಗ್ರಾಮದಲ್ಲಿ ಸುಬ್ರಹ್ಮಣ್ಯ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದೆ.

ಜಿಲ್ಲೆಯ ಕಳಸ ತಾಲೂಕಿನಾದ್ಯಂತ ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಮಳೆ ಬಿಡುವು ನೀಡಿತ್ತು. ಪರಿಣಾಮ ಭದ್ರಾ ನದಿಯಲ್ಲಿ ನೀರಿನ ಹರಿವು ಕೊಂಚ ಕಡಿಮೆಯಾಗಿದ್ದು, ಮುಳುಗಡೆಯಾಗಿದ್ದ ಹೆಬ್ಬಾಳೆ ಸೇತುವೆ ಮೇಲೆ ಹರಿಯುತ್ತಿದ್ದ ನೆರೆ ನೀರು ತೆರವುಗೊಂಡಿರುವುದರಿಂದ ಕಳಸ-ಹೊರನಾಡು ಸಂಪರ್ಕ ಪುನಾರಂಭಗೊಂಡಿದೆ. ಹೆಬ್ಬಾಳೆ ಸೇತುವೆ ಈ ಬಾರಿ ಹಲವು ಭಾರೀ ನದಿ ನೀರಿನಲ್ಲಿ ಮುಳುಗಡೆಯಾಗಿದ್ದರಿಂದ ಸೇತುವೆ ಶಿಥಿಲಗೊಂಡಿದ್ದು, ಸೇತುವೆ ಮೇಲಿನ ಡಾಂಬಾರು ಕಿತ್ತು ಹೋಗಿದೆ. ಅಲ್ಲದೇ ತಡೆಗೋಡೆಗಳಿಗೂ ಹಾನಿಯಾಗಿದೆ. ಸೇತುವೆ ಶಿಥಿಲಗೊಂಡಿರುವುದರಿಂದ ಪಕ್ಕದಲ್ಲೇ ನಿರ್ಮಿಸಲಾಗುತ್ತಿರುವ ಹೊಸ ಸೇತುವೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇನ್ನು, ಶನಿವಾರ ಕಳಸ ಪಟ್ಟಣ ಸಮೀಪದ ಕಾರ್ಗದ್ದೆ ಎಂಬಲ್ಲಿ ಆನಂದ್ ಶೆಟ್ಟಿ ಎಂಬವರ ಮನೆ ಮೇಲೆ ಬೃಹತ್ ಮರ ಉರುಳಿ ಮನೆ ಸಂಪೂರ್ಣವಾಗಿ ಜಖಂಗೊಂಡಿದ್ದರೆ, ಹೊಸೂರು-ಕೊಳಮಗೆ ಎಂಬಲ್ಲಿ ಬೃಹತ್ ಮರವೊಂದು ಉರುಳಿ ಅರಣ್ ಎಂಬ ರೈತರ ಜಮೀನಿನಲ್ಲಿದ್ದ 60 ಅಡಿಕೆ ಮರಗಳು ಧರೆಗುರುಳಿ ಹಾನಿ ಸಂಭವಿಸಿದ ಘಟನೆ ಶನಿವಾರ ವರದಿಯಾಗಿದೆ. ತಾಲೂಕಿನ ಯಡೂರು ಗ್ರಾಮದಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆ ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕಾಫಿ, ಅಡಿಕೆ ತೋಟಗಳು ಜಲಾವೃತಗೊಂಡಿವೆ.

ಉಳಿದಂತೆ ಜಿಲ್ಲೆಯ ಮಲೆನಾಡು ಭಾಗದ ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ಮಳೆ ಬಿಡುವು ನೀಡಿದ್ದು, ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ತಾಲೂಕಿನ ಅಲಲ್ಲಿ ಸಾಧಾರಣ ಮಳೆಯಾಗುತ್ತಿದೆ. ಇನ್ನು ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಮಳೆ ಸಂಪೂರ್ಣ ಬಿಡುವು ನೀಡಿದ್ದು, ಕೆಲ ಹೊತ್ತು ಬಿಸಿಲಿನ ವಾತಾವರಣ ನಿರ್ಮಾಣವಾಗಿತ್ತು. ಕಡೂರು, ಅಜ್ಜಂಪುರ, ತರೀಕೆರೆ ತಾಲೂಕುಗಳಲ್ಲೂ ವಾತಾವರಣ ತಿಳಿಗೊಂಡಿದೆ.

ಮುಳ್ಳಯ್ಯನಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದಲ್ಲಿ ಸಿಗುವ ಝರಿಫಾಲ್ಸ್ ಹಾಗೂ ಹೊನ್ನಮ್ಮನ ಹಳ್ಳದಲ್ಲಿ ಪ್ರಮಾಣದ ನೀರು ಹರಿಯುತ್ತಿದ್ದು, ಫಾಲ್ಸ್ ಗೆ ತೆರಳುವ ಮಾರ್ಗವನ್ನು ಬಂದ್ ಮಾಡಿ ಪ್ರವಾಸಿಗರು ತೆರಳದಂತೆ ನಿರ್ಬಂಧ ಹೇರಲಾಗಿದೆ. ಕೊಪ್ಪ ತಾಲೂಕಿನ ಕುದುರೆಗುಂಡಿ ಸಂಪರ್ಕ ಕಲ್ಪಿಸುವ ಕಾನೂರು-ಕಟ್ಟಿನಮನೆ ರಸ್ತೆ ಹಳ್ಳದ ನೀರಿನಿಂದ ಬ್ಲ್ಯಾಕ್ ಆಗಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹೊನ್ನಾಳ ಫಾರೆಸ್ಟ್ ಗೇಟ್-ಸಿದ್ದರಬಾನ್ ನಡುವಿನ ರಸ್ತೆಮೇಲೆ ಗುಡ್ಡ ಕುಸಿದಿದ್ದು, ಗುಡ್ಡದ ಮಣ್ಣನ್ನು ತೆರವುಗೊಳಿಸಲಾಗಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾದ ಹಿನ್ನಲೆಯಲ್ಲಿ ನದಿಗಳು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸಾರ್ವಜನಿಕರು, ಪ್ರವಾಸಿಗರು ಸುರಕ್ಷತೆ ದೃಷ್ಟಿಯಿಂದ ಕೆಲವು ಸಲಹೆ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಪ್ರವಾಸಿ ತಾಣಗಳು ಜಲಪಾತ ಪ್ರದೇಶಗಳು ಅಪಾಯಕಾರಿಯಾಗಿದ್ದು, ಪ್ರವಾಸಿಗರು ಎಚ್ಚರವಹಿಸಬೇಕು. ವೇಗವಾಗಿ ನೀರು ಹರಿಯುತ್ತಿದ್ದು, ಬಂಡೆಗಳ ಮೇಲ್ಬಾಗದಲ್ಲಿ ಪಾಚಿಕಟ್ಟಿರುವುದು ಹಾಗೂ ಮಂಜು ಕವಿದಿರುವುದರಿಂದ ಅಪಘಾತ, ಸಾವು ನೋವುಗಳು ಸಂಭವಿಸುವ ಸಾಧ್ಯತೆಗಳಿವೆ. ಮಳೆಯಿಂದ ಜಲಪಾತಗಳಲ್ಲಿ ನೀರಿನ ಮಟ್ಟ ಹಠಾತ್ ಏರಿಕೆಯಾಗುವ ಸಾಧ್ಯತೆ ಇದ್ದು, ಕೊಚ್ಚಿ ಹೋಗುವ ಸಂಭವವಿರುತ್ತದೆ. ಈ ಹಿನ್ನಲೆಯಲ್ಲಿ ಜಲಪಾತಗಳಿಗೆ ಭೇಟಿ ನೀಡದಿರುವುದು ಒಳ್ಳೆಯದು, ಬಂಡೆಗಳ ಮೇಲೆ ಪಾಚಿಕಟ್ಟಿರುವುದರಿಂದ ನೀರಿಗೆ ಇಳಿಯದೆ ಎಚ್ಚರವಹಿಸಬೇಕು. ನೀರಿನಿಂದ ಸುರಕ್ಷಿತ ಪ್ರದೇಶದಲ್ಲಿ ಇರುವುದು ಒಳ್ಳೇಯದು, ಮಳೆಗಾಲಕ್ಕೆ ಹೊಂದಿಕೊಳ್ಳುವ ಪಾದರಕ್ಷೆ ಮತ್ತು ಬಟ್ಟೆಯನ್ನು ಧರಿಸಬೇಕು. ನದಿ, ಜಲಪಾತ ಪ್ರದೇಶಗಳಲ್ಲಿ ಫೋಟೊ ವಿಡಿಯೋ ಮಾಡಲು ಮುಂದಾಗಬಾರದು, ಹುಚ್ಚಾಟ ಮತ್ತು ದುಸ್ಸಾಹಸಕ್ಕೆ ಪ್ರಯತ್ನಿಸಬಾರದು, ಸ್ಥಳೀಯ ವ್ಯಾಪ್ತಿಯ ಅಧಿಕಾರಿಗಳು ಮತ್ತು ಮಾರ್ಗದರ್ಶಿಗಳ ಸೂಚನೆಗಳನ್ನು ಪಾಲಿಸಬೇಕು. ಪ್ರವಾಸೋದ್ಯಮ, ಅರಣ್ಯ ಇಲಾಖೆ, ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಪಾಲಿಸಬೇಕು. ಬ್ಯಾರಿಕೇಡ್‍ಗಳನ್ನು ದಾಟಲು ಪ್ರಯತ್ನಿಸಬಾರದು. ಸಾಹಸ ಚಟುವಟಿಕೆಗಳಿಗೆ ಕೈಹಾಕಬಾರದು. ವಾಹನ ಸವಾರರು ರಕ್ಷಣಾತ್ಮಾಕವಾಗಿ ಚಾಲನೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ವಿಡಿಯೊಗಳನ್ನು ಹರಿಬಿಡಬಾರದು ಎಂದು ಪೊಲೀಸ್ ಇಲಾಖೆ ಸೂಚನೆ ನೀಡಿದೆ.














 


 


 


 


 


 


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News