ಶೃಂಗೇರಿ | ಬಾಲಕರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ತಿರುವು

Update: 2024-06-25 18:12 GMT

ಚಿಕ್ಕಮಗಳೂರು : ಶೃಂಗೇರಿ ಪಟ್ಟಣದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರ ಮೇಲೆ ಬಿಜೆಪಿ ಮುಖಂಡನೊಬ್ಬ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಪ್ರಕರಣ ಮಂಗಳವಾರ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ವೀಡಿಯೊ ಹೇಳಿಕೆ ನೀಡಿದ್ದ ಬಾಲಕರು ಪೊಲೀಸರ ಮುಂದೆ ತದ್ವಿರುದ್ಧ ಹೇಳಿಕೆ ನೀಡಿದ್ದು, ತಮ್ಮನ್ನು ಬೆದರಿಸಿ ವೀಡಿಯೊ ಮಾಡಲಾಗಿದೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬಾಲಕರ ಹೇಳಿಕೆಯ ವೀಡಿಯೊ ಮಾಡಿದ್ದ ವ್ಯಕ್ತಿಯ ವಿರುದ್ಧವೇ ಪೊಕ್ಸೊ ಪ್ರಕರಣ ದಾಖಲಿಸಿರುವ ಘಟನೆ ವರದಿಯಾಗಿದೆ.

ಶೃಂಗೇರಿಯಲ್ಲಿ ಎಸೆಸೆಲ್ಸಿ ಓದುತ್ತಿದ್ದ 16 ವರ್ಷದ ಓರ್ವ ಬಾಲಕ ಹಾಗೂ ಎಸೆಸೆಲ್ಸಿ ಅನುತ್ತೀರ್ಣನಾಗಿದ್ದ 17 ವರ್ಷದ ಮತ್ತೊಬ್ಬ ಬಾಲಕ ಜೂ.23ರಂದು ತಮ್ಮ ಮೇಲೆ ಶೃಂಗೇರಿ ಪ.ಪಂ.ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹರೀಶ್ ಶೆಟ್ಟಿ ಎಂಬವರು ಹಣ, ಸಿಗರೇಟ್, ಮದ್ಯದ ಆಮಿಷವೊಡ್ಡಿದ್ದಲ್ಲದೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ವೀಡಿಯೊ ಹೇಳಿಕೆ ನೀಡಿದ್ದರು. ಬಿಜೆಪಿ ಮುಖಂಡನ ಕೃತ್ಯದ ಬಗ್ಗೆ ಬಾಲಕರು ಹೇಳಿಕೆ ನೀಡಿದ್ದ ವೀಡಿಯೊವನ್ನು ಸ್ಥಳೀಯ ಗ್ರಾಪಂ ಸದಸ್ಯ ಶಬರೀಶ್ ಎಂಬವರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು. ನಂತರ ಈ ಸಂಬಂಧ ಶೃಂಗೇರಿ ಪೊಲೀಸರಿಗೆ ದೂರು ನೀಡಲು ತೆರಳಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಮಾಜಿ ಸಚಿವ ಜೀವರಾಜ್ ಆಪ್ತನಾಗಿರುವ ಹರೀಶ್ ಶೆಟ್ಟಿ ತಮ್ಮ ಪ್ರಭಾವ ಬಳಸಿ ಬಾಲಕರ ಪೋಷಕರ ಮೇಲೆ ಒತ್ತಡ ಹೇರಿ ದೂರು ದಾಖಲಾಗದಂತೆ ಮಾಡಿದ್ದಾರೆ ಎಂದು ಸೋಮವಾರ ಆರೋಪಿಸಿದ್ದರು.

ಮಂಗಳವಾರ ಈ ಘಟನೆ ಮತ್ತೊಂದು ತಿರುವು ಪಡೆದುಕೊಂಡಿದೆ. ಬಾಲಕರ ಹೇಳಿಕೆಯನ್ನು ವೀಡಿಯೊ ಮಾಡಿಕೊಂಡು ವೀಡಿಯೊದೊಂದಿಗೆ ಪೊಲೀಸರಿಗೆ ದೂರು ನೀಡಲು ಹೋಗಿದ್ದ ಶಬರೀಶ್ ಹಾಗೂ ಆತನ ಸ್ನೇಹಿತ ಸೂರ್ಯ ಎಂಬವರ ವಿರುದ್ಧವೇ ಶೃಂಗೇರಿ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿರುವ ಘಟನೆ ವರದಿಯಾಗಿದೆ. ಶಬರೀಶ್ ಸ್ನೇಹಿತ ಸೂರ್ಯ ಎಂಬಾತನ ಬಂಧನಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಲಕರು, ಪೋಷಕರ ಮೇಲೆ ಪ್ರಭಾವಿಗಳಿಂದ ಒತ್ತಡದ ಆರೋಪ: ಬಿಜೆಪಿ ಮುಖಂಡ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾನೆಂದು ಶಬರೀಶ್ ಬಳಿ ವೀಡಿಯೊ ಹೇಳಿಕೆ ನೀಡಿದ್ದ ಬಾಲಕರು ಮತ್ತು ಅವರ ಪೋಷಕರ ಮೇಲೆ ಹರೀಶ್ ಶೆಟ್ಟಿ ತನ್ನ ಪ್ರಭಾವ ಬಳಸಿ ಹಾಗೂ ಆಮಿಷವೊಡ್ಡಿ ಪ್ರಕರಣವನ್ನು ಮುಚ್ಚಿ ಹಾಕಲು ಹುನ್ನಾರ ನಡೆಸಿದ್ದಾರೆಂಬ ಆರೋಪವೂ ಕೇಳಿ ಬರುತ್ತಿದೆ.

ಮಕ್ಕಳ ರಕ್ಷಣ ಘಟಕದ ಸಿಬ್ಬಂದಿ ಈ ಬಾಲಕರನ್ನು ಭೇಟಿಯಾಗಿ ಕೌನ್ಸೆಲಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೌನ್ಸೆಲಿಂಗ್ ಮಾಡಿದ್ದವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ‘ವಾರ್ತಾಭಾರತಿ’ ಕರೆ ಮಾಡಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News