ಪರಿಷತ್ ಚುನಾವಣೆ | ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಭೋಜೇಗೌಡ ಗೆಲುವು

Update: 2024-06-06 14:45 GMT

 ಎಸ್.ಎಲ್.ಭೋಜೇಗೌಡ

ಚಿಕ್ಕಮಗಳೂರು : ವಿಧಾನ ಪರಿಷತ್‌ನ  ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಮೈಸೂರಿನಲ್ಲಿ ಗುರುವಾರ ನಡೆದಿದ್ದು, ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್.ಎಲ್.ಭೋಜೇಗೌಡ ಅವರು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಮೊದಲ ಪ್ರಾಶಸ್ತ್ಯದ 9,829 ಮತಗಳನ್ನು ಪಡೆಯುವ ಮೂಲಕ ಸತತ 2ನೇ ಬಾರಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ಕ್ಷೇತ್ರ ವ್ಯಾಪ್ತಿಯ ಮಂಗಳೂರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳು ಮತ್ತು ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕಿನ ಶಿಕ್ಷಕರು ಮತ ಚಲಾಯಿಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಸ್.ಎಲ್.ಭೋಜೇಗೌಡ, ಕಾಂಗ್ರೆಸ್‍ನಿಂದ ಮಂಜುನಾಥ್ ಕುಮಾರ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಭಾಸ್ಕರ್ ಶೆಟ್ಟಿ, ನರೇಶ್‍‌ ಹೆಗಡೆ, ಹರೀಶ್ ಆಚಾರ್ಯ, ಅರುಣ್, ಬಿ.ಆರ್.ನಂಜೇಶ್ ಬೆಣ್ಣೂರು, ಮಂಜುನಾಥ್ ಕಣದಲ್ಲಿದ್ದರು.

ಇದೇ ಕ್ಷೇತ್ರದಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಎಸ್.ಎಲ್.ಭೋಜೇಗೌಡ ಆರು ವರ್ಷಗಳ ಕಾಲ ವಿಧಾನ‌ ಪರಿಷತ್ ಸದಸ್ಯರಾಗಿದ್ದರು. ಶಿಕ್ಷಕರ ಸಮಸ್ಯೆ ಕುರಿತು ಪರಿಷತ್‍ನಲ್ಲಿ ಧ್ವನಿ ಎತ್ತಿದ್ದರು. ಶಿಕ್ಷಕರ ಸಮಸ್ಯೆ ನಿವಾರಣೆಗೆ ಸರಕಾರವನ್ನು ಒತ್ತಾಯಿಸಿದ್ದರು. ಈಗ ನಡೆದ ನೈರುತ್ಯ ಶಿಕ್ಷಕರು ಕ್ಷೇತ್ರದ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ 9,829 ಮತಗಳನ್ನು ಪಡೆಯುವ ಮೂಲಕ ಮರು ಆಯ್ಕೆಯಾಗಿದ್ದಾರೆ.

ಪದವೀಧರ ಕ್ಷೇತ್ರ : ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ಆಯನೂರು ಮಂಜುನಾಥ್, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಧನಂಜಯ ಸರ್ಜಿ ಕಣದಲ್ಲಿದ್ದಾರೆ. ಪಕ್ಷೇತರರಾಗಿ ದಿನಕರ ಉಲ್ಲಾಳ, ಎಸ್.ಪಿ.ದಿನೇಶ್, ಬಿ.ಮುಹಮ್ಮದ್, ಮಾಜಿ ಶಾಸಕ ಕೆ.ರಘುಪತಿಭಟ್, ಶೇಕ್ ಭಾವ, ಷಡಕ್ಷರಪ್ಪ ಮತ್ತು ಮುಜಾಯಿದ್ ಸಿದ್ದಿಕಿ ಕಣದಲ್ಲಿದ್ದಾರೆ. ಮತ ಎಣಿಕೆ ಕಾರ್ಯ ಇನ್ನೂ ನಡೆಯುತ್ತಿದ್ದು, ಮೈತ್ರಿ ಅಭ್ಯರ್ಥಿ ಧನಂಜಯ ಸರ್ಜಿ ಮುನ್ನಡೆ ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News