ಹಣ ಕೊಟ್ಟು ತನ್ನ ಚಾರಿತ್ರ್ಯ ವಧೆ ಮಾಡಿಸಲಾಗುತ್ತಿದೆ: ಮಾಧ್ಯಮಗಳ ವಿರುದ್ಧ ಕಂಗನಾ ಆಕ್ರೋಶ
ಮುಂಬೈ: ತನ್ನ ಚಿತ್ರಗಳನ್ನು ಫ್ಲಾಪ್ ಎಂದು ಕರೆದ ಮಾಧ್ಯಮಗಳ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಆಕ್ರೋಶ ಹೊರ ಹಾಕಿದ್ದಾರೆ.
ತನ್ನ ಚಲನಚಿತ್ರಗಳು 'ಫ್ಲಾಪ್' ಎಂದು ಬಣ್ಣಿಸಿರುವ ಮಾಧ್ಯಮ ವರದಿಗಳ ಸ್ಕ್ರೀನ್ಶಾಟ್ಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಬಾಲಿವುಡ್ ನಟಿ ಕಂಗನಾ, ಅವುಗಳನ್ನು "ಭಯಾನಕ ಹಾಗೂ ಅವಹೇಳನಕಾರಿ" ಎಂದು ಕರೆದಿದ್ದಾರೆ.
ನನ್ನ ವಿರುದ್ಧ ʼಪೇಯ್ಡ್ʼ ದಾಳಿಗಳು ನಡೆಯುತ್ತಿವೆ. ಫ್ಲಾಪ್ ಚಿತ್ರಗಳು ಎನ್ನಲಾದ ಚಿತ್ರಗಳು ವಾಸ್ತವವಾಗಿ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿವೆ ಎಂದು ಕಂಗನಾ ಸಮರ್ಥಿಸಿಕೊಂಡಿದ್ದಾರೆ.
ಈ ಮೂವಿ ಮಾಫಿಯಾ ಬಗ್ಗೆ ನನಗೇನೂ ಕೋಪವಿಲ್ಲ. ಆದರೆ ಪೇಯ್ಡ್ ಮಾಧ್ಯಮಗಳ ಮೂಲಕ ನಿರಂತರವಾಗಿ ನಡೆಯುತ್ತಿರುವ ಚಾರಿತ್ರ್ಯ ವಧೆಯ ಇಂಥ ಪ್ರಯತ್ನಗಳನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಜತೆ ಕಾರ್ಯ ನಿರ್ವಹಿಸಿದವರು ತನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಎಂದು ಹೇಳಿದ ಕಂಗನಾ, ನನ್ನ ಸಹೋದ್ಯೋಗಿಗಳು ಮಾಧ್ಯಮಗಳು ಯಾಕೆ ನನ್ನ ವಿರುದ್ಧ ಋಣಾತ್ಮಕ ವರದಿಯನ್ನು ಮಾಡುತ್ತವೆ ಎಂದು ಪ್ರಶ್ನಿಸಿರುವುದಾಗಿ ಹೇಳಿದ್ದಾರೆ.
"ನನ್ನನ್ನು ತಿಳಿದವರು ಅಥವಾ ನನ್ನ ಜತೆ ಕೆಲಸ ಮಾಡಿದವರು, ಒಕ್ಕೊರಲಿನಿಂದ ಒಂದಂಶವನ್ನು ಕೇಳುತ್ತಾರೆ. ಅದೇನಂದರೆ, ʼನಿಮ್ಮ ಬಗ್ಗೆ ಮಾಧ್ಯಮ ಇಂಥ ಭಯಾನಕ ಭಾವನೆಯನ್ನು ಏಕೆ ಹೊಂದಿದೆ?. ನಾವು ಕೆಲಸ ಮಾಡಿದವರ ಪೈಕಿ ನೀವು ಅತ್ಯಂತ ವೃತ್ತಿಪರ ಮತ್ತು ಅದ್ಭುತ ನಟಿ/ನಿರ್ದೇಶಕಿ/ಕಲಾವಿದೆʼ. ನನ್ನ ಜತೆ ಕೆಲಸ ಮಾಡಿದ ಪ್ರತಿಯೊಬ್ಬರಿಂದ ಇಂಥ ಮಾತು ಪ್ರತಿ ದಿನ ಕೇಳಿಬರುತ್ತಿದೆ” ಎಂದು ಅವರು ಹೇಳಿದ್ದಾರೆ.