ಅಕ್ರಮ ಹಣ ವರ್ಗಾವಣೆ ಆರೋಪ: 'ಮಂಜುಮ್ಮೆಲ್ ಬಾಯ್ಸ್' ಚಿತ್ರದ ನಿರ್ಮಾಪಕರ ವಿರುದ್ಧ ತನಿಖೆಗೆ ಮುಂದಾದ ED

Update: 2024-06-12 11:56 GMT

ಮಂಜುಮ್ಮೆಲ್ ಬಾಯ್ಸ್ ಚಿತ್ರದ ಪೋಸ್ಟರ್ | PC : X

ತಿರುವನಂತಪುರಂ: ಅಕ್ರಮ ಹಣ ವರ್ಗಾವಣೆ ನಡೆಸಲಾಗಿದೆ ಎಂಬ ಆರೋಪದಡಿ 'ಮಂಜುಮ್ಮೆಲ್ ಬಾಯ್ಸ್' ಚಿತ್ರದ ನಿರ್ಮಾಪಕರಾದ ಸೌಬಿನ್ ಶಾಹಿರ್, ಶಾನ್ ಆ್ಯಂಟನಿ ಹಾಗೂ ಬಾಬು ಶಾಹಿರ್ ಅವರಿಗೆ ಜಾರಿ ನಿರ್ದೇಶನಾಲಯವು ನೋಟಿಸ್ ಜಾರಿಗೊಳಿಸಿದೆ ಎಂದು ವರದಿಯಾಗಿದೆ. ಕೊಚ್ಚಿಯಲ್ಲಿರುವ ತನ್ನ ಕಚೇರಿಗೆ ಹಾಜರಾಗುವಂತೆ ಈ ಮೂವರಿಗೂ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಮೂವರು ನಿರ್ಮಾಪಕರ ವಿರುದ್ಧ ಎರ್ನಾಕುಲಂನಲ್ಲಿರುವ ಮರಡು ಠಾಣೆಯ ಪೊಲೀಸರು ಮೇ 29ರಂದು ಕೇರಳ ಹೈಕೋರ್ಟ್‌ಗೆ ವರದಿಯೊಂದನ್ನು ಸಲ್ಲಿಸಿದ್ದರು. ಆ ವರದಿಯಲ್ಲಿ ಈ ಮೂವರು ನಿರ್ಮಾಪಕರು ಹಣಕಾಸು ವಂಚನೆಯಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಹೇಳಲಾಗಿತ್ತು. ಈ ವರದಿಯನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಇಸಿಐರ್ ದಾಖಲಿಸಿಕೊಂಡಿದೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ, ಎಪ್ರಿಲ್ ತಿಂಗಳಲ್ಲಿ 'ಮಂಜುಮ್ಮೆಲ್ ಬಾಯ್ಸ್' ಚಿತ್ರದ ಹೂಡಿಕೆದಾರ ಸಿರಾಜ್ ವಲಿಯತಾರಾ ಹಮೀದ್ ನೀಡಿದ್ದ ದೂರನ್ನು ಆಧರಿಸಿ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.

ಈ ಕುರಿತು ಜೂನ್ ತಿಂಗಳಲ್ಲಿ The News Minute ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ್ದ ಮರಡು ಠಾಣೆಯ ಪೊಲೀಸರು, ಸಿರಾಜ್ ವಲಿಯತಾರಾ ಹಮೀದ್ ಅವರು 'ಮಂಜುಮ್ಮೆಲ್ ಬಾಯ್ಸ್' ಚಿತ್ರ ನಿರ್ಮಾಣದಲ್ಲಿ ರೂ.‌ 7 ಕೋಟಿ ಹೂಡಿಕೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ, ಒಂದು ವೇಳೆ ಚಿತ್ರ ಯಶಸ್ಸು ಕಂಡರೆ, ಬಂದ ಲಾಭದಲ್ಲಿ ಶೇ. 40ರಷ್ಟು ಲಾಭಾಂಶವನ್ನು ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ, ಈ ಮೂವರು ಚಿತ್ರ ನಿರ್ಮಾಪಕರಿಂದ ಸಿರಾಜ್ ಲಾಭಾಂಶವನ್ನೂ ಸ್ವೀಕರಿಸಲಿಲ್ಲ ಅಥವಾ ಹೂಡಿಕೆ ಮಾಡಿದ್ದ ಬಂಡವಾಳವನ್ನೂ ಹಿಂಪಡೆಯಲಿಲ್ಲ. ಚಿತ್ರವು ಭಾರಿ ಯಶಸ್ಸು ಗಳಿಸಿ, ಸುಮಾರು ರೂ. 250 ಕೋಟಿ ಸಂಪಾದಿಸಿದರೂ, ನಿರ್ಮಾಪಕ ತ್ರಯರು ಸಿರಾಜ್ ಅವರಿಗೆ ಕೇವಲ ರೂ. 50 ಲಕ್ಷ ಹಿಂದಿರುಗಿಸಿದ್ದರು ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News