ಲೈಂಗಿಕ ಕಿರುಕುಳದ ಆರೋಪ : ಅಮ್ಮಾ ಕಾರ್ಯದರ್ಶಿ ಸ್ಥಾನಕ್ಕೆ ಸಿದ್ದೀಕ್, ಕೇರಳ ಚಲನಚಿತ್ರ ಅಕಾಡಮಿ ಅಧ್ಯಕ್ಷತೆಗೆ ರಂಜಿತ್ ರಾಜೀನಾಮೆ
ಕೊಚ್ಚಿ : ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿ ಜನಪ್ರಿಯ ಚಿತ್ರ ನಟ ಸಿದ್ದೀಕ್ ಅವರು ಮಲಯಾಳಂ ಸಿನೆಮಾ ಕಲಾವಿದರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಹಾಗೂ ಚಿತ್ರ ನಿರ್ದೇಶಕ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ವಿರುದ್ಧ ನಡೆದಿದೆಯೆನ್ನಲಾದ ದೌರ್ಜನ್ಯಗಳ ಕುರಿತಾದ ಆಘಾತಕಾರಿ ವಿವರಗಳನ್ನು ಹೇಮಾ ಸಮಿತಿ ಬಹಿರಂಗಪಡಿಸಿದ ಬೆನ್ನಲ್ಲೇ ಇವರಿಬ್ಬರ ರಾಜೀನಾಮೆ ಮಲಯಾಳಂ ಚಿತ್ರರಂಗದಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಸಿದ್ದೀಕ್ ವಿರುದ್ಧ ನಟಿ ರೇವತಿ ಸಂಪತ್ ಅವರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. 2016ರಲ್ಲಿ ತಾನು ಕೊಚ್ಚಿಯ ಹೊಟೇಲೊಂದರಲ್ಲಿ ತಂಗಿದ್ದಾಗ, ಸಿದ್ದೀಕ್ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವುದಾಗಿ ರೇವತಿ ಸಂಪತ್, ಫೇಸ್ಬುಕ್ ಪೋಸ್ಟ್ನಲ್ಲಿ ಆಪಾದಿಸಿದ್ದಾರೆ.
2019ರಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಕೇರಳ ಚಿತ್ರರಂಗದಲ್ಲಿ ಆರಂಭಗೊಂಡ ‘ಮೀ ಟೂ’ ಆಂದೋಲನದ ಅಂಗವಾಗಿ ತೆರೆಯಲಾದ ಫೇಸ್ಬುಕ್ ಪೋಸ್ಟ್ನಲ್ಲಿ ರೇವತಿ ಮೊದಲ ಬಾರಿ ಈ ಆರೋಪ ಮಾಡಿದ್ದರು.
ಇತ್ತೀಚೆಗೆ ಪ್ರಕಟವಾದ ಹೇಮಾ ಸಮಿತಿಯ ವರದಿಗೆ ಸಂಬಂಧಿಸಿ ಸಿದ್ದೀಕ್ ಪತ್ರಿಕಾಗೋಷ್ಠಿಯನ್ನು ನಡೆಸಿದ ಬೆನ್ನಲ್ಲೇ ರೇವತಿ ಸಂಪತ್ ತನ್ನ ಆರೋಪಗಳನ್ನು ಪುನರುಚ್ಚರಿಸಿದ್ದಾರೆ.
ರೇವತಿ ಅವರ ಹೇಳಿಕೆ ಶನಿವಾರ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದಂತೆಯೇ, ಸಿದ್ದೀಕ್ ಅಮ್ಮಾದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ಅವರು ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಂಗಾಳಿ ನಟಿ ಚಾರುಲತಾ ಮಿತ್ರಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆಪಾದಿಸಿದ್ದರು. ಪಲೇರಿ ಮಾಣಿಕ್ಯಂ ಚಿತ್ರೀಕರಣದ ಸಂದರ್ಭದಲ್ಲಿ ರಂಜಿತ್ ತನ್ನನ್ನು ಅಸಭ್ಯವಾದ ರೀತಿಯಲ್ಲಿ ಸ್ಪರ್ಶಿಸಿದ್ದರೆಂದು ಆಕೆ ದೂರಿದ್ದಾರೆ. ಈ ಆರೋಪವು ಕೇರಳದಲ್ಲಿ ರಾಜಕೀಯ ವಿವಾದವನ್ನು ಸೃಷ್ಟಿಸಿದ ಬೆನ್ನಲ್ಲೇ ರಂಜಿತ್ ಕೇರಳ ಚಲನಚಿತ್ರ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಮಧ್ಯೆ ಲೈಂಗಿಕ ಕಿರುಕುಳದ ಆರೋಪಗಳಿಗೆ ಸಂಬಂಧಿಸಿ ಸಿದ್ದೀಕ್ ಹಾಗೂ ರಂಜಿತ್ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಕೋರಿ ವಿಟ್ಟಿಲಾ ಪ್ರದೇಶದ ನಿವಾಸಿ ಅಜಿತ್ ಕುಮಾರ್ ಎಂಬವರು ಕೊಚ್ಚಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಪೊಸ್ಕೊ ಕಾಯ್ದೆಯಡಿ ಸಿದ್ದೀಕ್ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಆದರೆ ಸಂತ್ರಸ್ತರಲ್ಲದ ಮೂರನೇ ವ್ಯಕ್ತಿಯು ಸಲ್ಲಿಸಿದ ದೂರನ್ನು ಆಧರಿಸಿ ಕಾನೂನುಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಈ ನಿಟ್ಟಿನಲ್ಲಿ ತಾವು ಯಾವುದೇ ಕಾನೂನು ಹೋರಾಟಕ್ಕೆ ಮುಂದಾಗುವುದಿಲ್ಲವೆಂದು ರೇವತಿ ಸಂಪತ್ ಹಾಗೂ ಶ್ರೀಲೇಖಾ ಮಿತ್ರಾ ಇಬ್ಬರೂ ಸ್ಪಷ್ಟಪಡಿಸಿದ್ದಾರೆ.
ಲೈಂಗಿಕ ಕಿರುಕುಳದ ಸಂತ್ರಸ್ತರು ನಡೆಸುವ ಕಾನೂನು ಹೋರಾಟಕ್ಕೆ ಕೇರಳ ಸರಕಾರವು ಬೆಂಬಲ ನೀಡುವ ತನಕ ತಾನು ಸಿದ್ದೀಕ್ ವಿರುದ್ಧ ಯಾವುದೇ ಮೊಕದ್ದಮೆ ಹೂಡುವುದಿಲ್ಲವೆಂದು ರೇವತಿ ಸಂಪತ್ ಹೇಳಿದ್ದಾರೆ.