ಮಾರಿ ಸೆಲ್ವರಾಜ್ ಅಧ್ಯಾಯ ಮೂರು: ‘ಮಾಮಣ್ಣನ್’

Update: 2023-07-03 09:56 GMT

ದೃಶ್ಯ ಒಂದು

ಮಾಮಣ್ಣನ್ ದಲಿತ ಸಮುದಾಯಕ್ಕೆ ಸೇರಿದ ಶಾಸಕ. ಒಬ್ಬ ರಾಜಕಾರಣಿಯ ಸುತ್ತ ಸದಾ ಗಿಜಿಗುಡುವ ಜನ, ಆಳು ಕಾಳುಗಳು ಮಾಮಣ್ಣನ್ ಮನೆಯಲ್ಲಿಲ್ಲ. ಮಾಮಣ್ಣನ್ ಮನೆಗೆ ಆತನನ್ನು ನೋಡಲೆಂದು ಬಂದವರು, ಸಮಸ್ಯೆಯ ಬುತ್ತಿಯೊಂದಿಗೆ ಬಂದವರು ಆತನೆದುರು ಕೂತೇ ಮಾತಾಡಬೇಕು. ಇದು ಮಾಮಣ್ಣನ ಅಲಿಖಿತ ನಿಯಮ.

ದೃಶ್ಯ ಎರಡು

ಅದು ರತ್ನವೇಲುವಿನ ಮನೆ. ರತ್ನವೇಲು ಇದೇ ಮಾಮಣ್ಣನ್ ಎತ್ತಿಆಡಿ ಬೆಳೆಸಿದ ಕೂಸು. ಈಗವನು ಪ್ರಭಾವಿ ರಾಜಕಾರಣಿ. ಇಂಥ ರತ್ನವೇಲುವಿನ ಎದುರು ಮಾಮಣ್ಣನ್ ಆಳುವ ಪಕ್ಷದ ಶಾಸಕನಾದರೂ ಕುರ್ಚಿಯಲ್ಲಿ ಕೂರುವಂತಿಲ್ಲ. ತನ್ನ ಸಮಕ್ಕೆ ತನ್ನದೇ ಪಕ್ಷದ ದಲಿತ MLA ಮಾಮಣ್ಣನ್ ಕೂರುವುದನ್ನು ಯಾವತ್ತಿಗೂ ಸಹಿಸದ ಕ್ರೌರ್ಯದ ಬೀಜಗಳು ರತ್ನವೇಲುವಿಗೆ ಅವನ ಅಪ್ಪನಿಂದ ಬಳುವಳಿಯಾಗಿ ಬಂದಿವೆ.

ಮಾರಿ ಸೆಲ್ವರಾಜ್ ಈ ಹಿಂದೆ ತಾನು ರೂಪಿಸಿದ ಪರಿಯೇರುಮ್ ಪೆರುಮಾಳ್ ಮತ್ತು ಕರ್ಣನ್ ಸಿನೆಮಾ ಗಳ ಮೂಲಕ ಮಂಡಿಸಲು ಹೊರಟ ಜಾತಿ ತಾರತಮ್ಯದ ಗ್ರಾಮ್ಯಭಾರತದ ಕಥಾನಕವನ್ನು ‘ಮಾಮಣ್ಣನ್’ ಮೂಲಕ ಒಂದು ಪೊಲಿಟಿಕಲ್ ಸ್ಟೇಟ್ಮೆಂಟ್ ರೂಪದಲ್ಲಿ ಹಿಗ್ಗಿಸಿಕೊಂಡಿದ್ದಾರೆ. ತನ್ನ ಜೊತೆಗಾರರಾದ ವೆಟ್ರಿಮಾರನ್, ಪಾ.ರಂಜಿತ್, ನಾಗರಾಜ್ ಮಂಜುಳೆ... ಜಾತಿಪ್ರಣೀತ ಶೋಷಣೆಗೆ ಎದೆಕೊಡಲು ತಮ್ಮ ಸಣ್ಣಪುಟ್ಟ ಪ್ರತಿರೋಧದ ಕಾಲುದಾರಿಯನ್ನೇ ಹೆದ್ದಾರಿ ಮಾಡಿಕೊಂಡಂತೆ ಮಾರಿ ಸೆಲ್ವರಾಜ್ ಕೂಡ ಪ್ರತಿರೋಧದ ದಿಟ್ಟಪಠ್ಯವನ್ನು ತಮ್ಮ ಮೂರು ಸಿನೆಮಾ ಗಳಲ್ಲೂ ದಿಟ್ಟವಾಗಿ ಮಂಡಿಸಿ ಗೆದ್ದಿದ್ದಾರೆ.

ದಲಿತ ಮಕ್ಕಳು ಈಜಾಡಲು ಸಾರ್ವಜನಿಕ ಬಾವಿಯನ್ನು ಬಳಸಿದ್ದಕ್ಕೆ ಊರ ಮೇಲ್ಜಾತಿಯ ಮಂದಿ ಆ ಮಕ್ಕಳನ್ನು ಸಾಯುವಂತೆ ಹೊಡೆಯುತ್ತಾರೆ. ಆ ಮಕ್ಕಳ ಸಾವಿಗೆ ಮಾಮಣ್ಣನ್ ನಂಬಿರುವ ಮೇಲ್ಜಾತಿಯ ಶಾಸಕನಿಂದ ನ್ಯಾಯ ಸಿಗುವುದಿಲ್ಲ. ‘ಮೂರು ಮಕ್ಕಳ ಸಾವಿಗೆ ನ್ಯಾಯ ಕೊಡಿಸಲು ಹೊರಟರೆ ಇಡೀ ಊರವರನ್ನೇ ಎದುರು ಹಾಕಿಕೊಳ್ಳಬೇಕಾಗುತ್ತದೆ’ ಎಂಬ ಮೇಲ್ಜಾತಿ ಶಾಸಕನ ಮಾತುಗಳು ಮೊದಲೇ ಅಸಹಾಯಕತೆ, ಅವಮಾನಗಳಲ್ಲಿ ಕುದ್ದುಹೋಗಿರುವ ಮಾಮಣ್ಣನನ್ನು ಇನ್ನಷ್ಟು ಅಸಹಾಯಕತೆಗೆ ದೂಡುತ್ತವೆ. ಮಾಮಣ್ಣನ ಈ ಅಸಹಾಯಕತೆಯನ್ನು ಅವನ ಮಗ ಅತಿವೀರನ್ ಅರ್ಥಮಾಡಿಕೊಳ್ಳುವಷ್ಟು ಪ್ರೌಢನಲ್ಲ.

ಮುಂದೆ ಕಾಲಚಕ್ರ ಉರುಳಿದಂತೆ ಮಾಮಣ್ಣನ್ ಕೂಡ ರಾಜಕೀಯವಾಗಿ ಬೆಳೆದು ಶಾಸಕನಾಗುತ್ತಾನೆ. ಆದರೆ, ಧಣಿಗಳ ಎದುರು ಕೈಕಟ್ಟಿ ನಿಲ್ಲುವ ಜೀತದಾಳುಗಳ ಸ್ಥಿತಿಯಿಂದ ಮಾತ್ರ ಮಾಮಣ್ಣನ್ ಇನ್ನೂ ಪಾರಾಗಿರುವುದಿಲ್ಲ. ಹಾಗೇ ಪಾರಾಗುವ, ಜಾತಿಸೊಕ್ಕಿನ ಎದುರು ಎದೆಕೊಟ್ಟು ನಿಲ್ಲುವ ಸಂದರ್ಭವೊಂದು ಮಾಮಣ್ಣನ್ಗೂ ಮತ್ತು ಆತನ ಮಗ ಅತಿವೀರನ ಬದುಕಿನಲ್ಲೊಂದು ದಿನ ಬಂದೇಬಿಡುತ್ತದೆ.

ಹಠಾತ್ ಪ್ರತಿರೋಧ ಒಡ್ಡುವ ಸಂದರ್ಭವೊಂದರಲ್ಲಿ ತನ್ನ ಫ್ಯೂಡಲ್ ಜಾತಿಯ ಅಹಮ್ಮನ್ನೇ ಉಂಡು ಉಸಿರಾಡುವ ‘ರತ್ನವೇಲು’ವಿನ ಜಾತಿಸೊಕ್ಕಿಗೆ ಮಾಮಣ್ಣನೂ ಮತ್ತವನ ಮಗ ಅತಿವೀರನೂ ಸರಿಯಾದ ಪೆಟ್ಟುಕೊಟ್ಟಿದ್ದಾರೆ. ಈಗ ರತ್ನವೇಲು ಗಾಯಗೊಂಡ ಹುಲಿ. ಯಾವ ಕ್ಷಣದಲ್ಲಾದರೂ ಸ್ಫೋಟಗೊಳ್ಳಬಲ್ಲ ಕ್ರೂರಿ. ತನ್ನನ್ನೇ ದಹಿಸಿಕೊಂಡು ಸುತ್ತಲ ಸಮಾಜವನ್ನು ದಹಿಸಬಲ್ಲ ಪಾತಕಿ. ತಾನು ಸಾಕಿದ ನಾಯಿಯೊಂದು ಪಂದ್ಯದಲ್ಲಿ ಗೆಲ್ಲಲಿಲ್ಲ ಎಂಬ ಒಂದೇ ಕಾರಣಕ್ಕೆ ಅದನ್ನು ಬರ್ಬರವಾಗಿ ಕೊಲ್ಲುವಷ್ಟೇ ಮನುಷ್ಯರನ್ನು ಕೂಡ ಅಷ್ಟೇ ಕ್ರೂರವಾಗಿ, ಸಲೀಸಾಗಿ ಕೊಲ್ಲಬಲ್ಲ ನಿಸ್ಸೀಮ ರತ್ನವೇಲು. ಪರಿಸ್ಥಿತಿಯೆಂಬುದು ಈಗವನನ್ನು ತನ್ನದೇ ಪಕ್ಷದ ಮುಖ್ಯಮಂತ್ರಿಯ ಎದುರು ಕೈಕಟ್ಟಿ ನಿಲ್ಲುವಂತೆ ಮಾಡಿದೆ.

ಮೈಮನಸ್ಸು ಮಾಗಿದ, ನಿಷ್ಠುರತೆ, ಅಂತಃಕರಣ ಸೂಸುವ ಮುಖ್ಯಮಂತ್ರಿ ರತ್ನವೇಲುವಿನ ಕ್ರೌರ್ಯವನ್ನು ಕಣ್ಣಲ್ಲೇ ಅಂದಾಜಿಸುತ್ತಾನೆ. ಜಾತಿ, ಪಕ್ಷ... ಎರಡರಲ್ಲೊಂದು ಆಯ್ಕೆಮಾಡಿಕೊಳ್ಳುವ ಅನಿವಾರ್ಯತೆಯನ್ನು ಮುಖ್ಯಮಂತ್ರಿ ರತ್ನವೇಲುವಿನ ಮುಂದಿಡುತ್ತಾನೆ. ನಾವೆಲ್ಲ ಸುಲಭವಾಗಿ ಊಹಿಸಬಹುದಾದಂತೆ ರತ್ನವೇಲು ಪಕ್ಷ ತೊರೆಯುತ್ತಾನೆ. ತನ್ನದೇ ಫ್ಯೂಡಲ್ ಜಾತಿಯ ಸೊಕ್ಕನ್ನು ಆಯ್ಕೆಮಾಡಿಕೊಂಡು ಇನ್ನಷ್ಟು ಕ್ರೂರಿಯಾಗುತ್ತಾನೆ.

ಮುಂದೆ ಮಾಮಣ್ಣನ್ಗೂ ಆತನ ಮಗ ಅತಿವೀರನ್ಗೂ ಕಡುಕಷ್ಟದ, ದಿಗಿಲಿನ ಕ್ಷಣಗಳು ಹಾದಿಗುಂಟ ಎದುರಾಗುತ್ತವೆ. ಇಂತಹ ಕಠಿಣ ಹಾದಿಯಲ್ಲಿ ಅವರಿಬ್ಬರು ಏಕಕಾಲಕ್ಕೆ ಜಾತಿಸೊಕ್ಕಿನವರ ವಿರುದ್ಧವೂ ಹಾಗೂ ಚುನಾವಣೆಯಲ್ಲೂ ಗೆಲ್ಲಬೇಕಿದೆ. ಅಪ್ಪ, ಮಗ ಇಬ್ಬರೂ ಗೆಲ್ಲುವ, ಸೋಲುವ, ಕಣ್ಣೀರಿಡುವ ಕ್ಷಣಗಳ ಅನುಭೂತಿಯನ್ನು ಚಿತ್ರ ನೋಡಿಯೇ ಅನುಭವಿಸಬೇಕು. ಸಿನೆಮಾದ ಮೊದಲರ್ಧದ ಬಿಗಿ ನಿರೂಪಣೆ ಪೊಲಿಟಿಕಲ್ ಕ್ರೈಮ್ ಥ್ರಿಲ್ಲರ್ ಜಾನರ್ನ ಇಂಡಿಯಾದ ಯಶಸ್ವಿ ಚಿತ್ರಗಳನ್ನು ಕಣ್ಣಮುಂದೆ ತಂದು ನಿಲ್ಲಿಸಿದರೆ, ಉತ್ತರಾರ್ಧದಲ್ಲಿ ಆ ಬಿಗಿ ಸಡಿಲಗೊಳ್ಳುತ್ತದೆ.

ನೂರಾರು ತಮಿಳು ಸಿನೆಮಾಗಳಲ್ಲಿ ಸಾವಿರಾರು ಗಂಟೆಗಳ ಕಾಲ ತನ್ನ ಹಾಸ್ಯ, ವಿಚಿತ್ರ ದನಿ, ಬಾಡಿ ಲಾಂಗ್ವೇಜ್ಗಳಿಂದಲೇ ನಗುವಿನ ಕಡಲನ್ನೇ ಹರಿಸಿರುವ ವಡಿವೇಲು ‘ಮಾಮಣ್ಣನ್’ ಆಗಿ ಪೂರ್ತಿ ಪರಕಾಯ ಪ್ರವೇಶವನ್ನೇ ಮಾಡಿ ಗೆದ್ದಿದ್ದಾರೆ. ಈ transformation ಕಾಣಲು ವಡಿವೇಲುವಿಗೆ ಮೂರುವರೆ ದಶಕಗಳು ಬೇಕಾದವು. ತಮಿಳು ಸಿನೆಮಾಗಳಲ್ಲಿ ಯಶಸ್ವಿ ಹಾಸ್ಯನಟನಾಗಿ ಹತ್ತಾರು ಏಳುಬೀಳುಗಳನ್ನು ಕಂಡಿರುವ ವಡಿವೇಲುವಿಗೆ ‘ಮಾಮಣ್ಣನ್’ ಒಂದರ್ಥದಲ್ಲಿ ಮರುಜೀವ ನೀಡಿದ ಚಿತ್ರ. ತಮಿಳು ಚಿತ್ರರಂಗದಿಂದ ಆರು ವರ್ಷಗಳ ಕಾಲ ಅಮಾನತುಗೊಂಡು ಕೊನೆಗದು ಮೂರು ವರ್ಷಕ್ಕಿಳಿದು ವಡಿವೇಲು ಮತ್ತೆ ನಟನೆಗೆ ಬರುವಷ್ಟರಲ್ಲಿ ವಡಿವೇಲು ಜಾಗಕ್ಕೆ ಹತ್ತಾರು ಹಾಸ್ಯನಟರು ಬಂದಾಗಿತ್ತು. ‘ಮಾಮಣ್ಣನ್’ ಪಾತ್ರದಲ್ಲಿ ವಡಿವೇಲುವನ್ನು ಕಂಡವರು ಬರಿಯ ಹಾಸ್ಯಪಾತ್ರಕ್ಕೆ ಮೀಸಲಿಟ್ಟ ತಮಿಳು ಸಿನೆಮಾ ರಂಗದ ದಿಗ್ಗಜ ನಿರ್ದೇಶಕರ ಮೇಲೆ ಹಿಡಿಶಾಪ ಹಾಕಿದ್ದು ಉಂಟು.

ಇನ್ನೂ ‘ಮಾಮಣ್ಣನ್’ ಎದುರು ‘ರತ್ನವೇಲು’ ಹೆಸರಿನ ಖಳನ ಪಾತ್ರದಲ್ಲಿ ನಟಿಸಿರುವುದು ಮಲಯಾಳಿ ನಟ ಫಹಾದ್ ಫಾಝಿಲ್. ಚಿತ್ರದಲ್ಲಿ ವಡಿವೇಲು ಮತ್ತು ಫಹಾದ್ ಫಾಝಿಲ್ ಪೈಪೊಟಿಗೆ, ಜಿದ್ದಿಗೆ ಬಿದ್ದವರಂತೆ ನಟಿಸಿದ್ದರೂ ಹತ್ತಾರು ಕಡೆ ಫಹಾದ್ ಫಾಝಿಲ್ ನಟನೆಯಲ್ಲಿ, ವಡಿವೇಲುವನ್ನು ಹಿಂದಿಕ್ಕುತ್ತಾರೆ. ಮಲಯಾಳಂ ಸಿನೆಮಾ ‘ಕುಂಬಳಂಗಿ ನೈಟ್ಸ್’ನಲ್ಲಿ ಸಿಗದ ಖಳನ ಪಾತ್ರಕ್ಕೆ ಬೇಕಾದ ಸುದೀರ್ಘ ಕ್ಯಾನ್ವಾಸನ್ನು ಮಾರಿ ಸೆಲ್ವರಾಜ್ ಫಹಾದ್

ಫಾಝಿಲ್’ ಗೆ ‘ಮಾಮಣ್ಣನ್’ ಸಿನೆಮಾದಲ್ಲಿ ದಂಡಿಯಾಗಿ ಕಟ್ಟಿಕೊಟ್ಟಿದ್ದಾರೆ.

ಚಿತ್ರದ ಉತ್ತರಾರ್ಧದ ಸಡಿಲತಗೆ ಮುಖ್ಯ ಕಾರಣ ನಿರ್ದೇಶಕ ಮಾರಿ ಸೆಲ್ವರಾಜ್ ಕಮರ್ಷಿಯಲ್ ಸಿನೆಮಾಗಳ ಸಿದ್ಧಸೂತ್ರಗಳಿಗೆ ಆತುಕೊಂಡಿರುವುದು. ಹೀಗಾಗಿಯೇ ನಾಯಕನಟ ಉದಯನಿಧಿ ಸ್ಟಾಲಿನ್ಗೆಂದೆ ಒಂದಷ್ಟು ಹೊಡಿಬಡಿ ಸನ್ನಿವೇಶಗಳನ್ನು ಚಿತ್ರಕತೆಗೆ ಪೂರಕವಾಗಿಯೇ ಕಟ್ಟಿಕೊಡಲಾಗಿದೆ.

ಕಳೆದ ಒಂದು ದಶಕದಿಂದ ಸಂಗೀತ ನಿರ್ದೇಶಕರಾದ ಸಂತೋಷ್ ನಾರಾಯಣ್, ಯುವನ್ ಶಂಕರ್ರಾಜ, ಜಿ.ವಿ.ಪ್ರಕಾಶ್ಕುಮಾರ್, ಥಾಮನ್, ಅನಿರುದ್ಧ ಎದುರು ಪೈಪೋಟಿ ನೀಡುವಲ್ಲಿ ತಮ್ಮ ಲಯ ಕಳೆದುಕೊಂಡಂತೆ ಕಾಣುವ ಎ.ಆರ್.ರೆಹಮಾನ್ ಗ್ರಾಮ್ಯ ಸೊಗಡಿನ ಮಣ್ಣುಬೇರಿನ ಚಿತ್ರಗಳಿಗೆ ಸಂಗೀತ ನೀಡುವಲ್ಲಿ ಯಾಕೋ ಮಂಕಾದಂತೆ ಕಾಣುತ್ತಾರೆ. ಮಡ್ರಾಸ್, ಕಾಲಾ, ಸಾರ್ಪಟ್ಟ ಪರಂಬರೈ, ಅಸುರನ್, ಕರ್ಣನ್, ಪರಿಯೇರುಮ್ ಪೆರುಮಾಳ್, ವಡಾಚೆನ್ನೈನಂತಹ ಚಿತ್ರಗಳು ಅದರ ಸಂಗೀತ, ಹಿನ್ನೆಲೆ ಸಂಗೀತದ ಕಾರಣಕ್ಕೆ ಇವತ್ತಿಗೂ ಸಿನಿಪ್ರಿಯರ ನಡುವೆ ಚರ್ಚೆಯಲ್ಲಿವೆ.

ಥೆನಿ ಈಶ್ವರ್ ಫೋಟೊಗ್ರಫಿಯಂತೂ ಮನುಷ್ಯರಂತೆ ಬಂಡೆಕಲ್ಲುಗಳು ಕೂಡ ಮಾತಾಡಬಲ್ಲುವು ಎನ್ನುವುದನ್ನು ಹೊರಾಂಗಣ ಮತ್ತು ಒಳಾಂಗಣ ಚಿತ್ರಿಕೆಯಲ್ಲಿ ಪದೇ ಪದೇ ಸಾಬೀತುಮಾಡುತ್ತವೆ. ಥೆನಿ ಈಶ್ವರ್ ಕ್ಯಾಮರಾ ಕುಸುರಿಗೆ ಚಂದದ ತೋರಣ ಕಟ್ಟಿರುವುದು ಆರ್.ಕೆ.ಸೆಲ್ವ ಸಂಕಲನ. ‘ಮಾಮಣ್ಣನ್’ ಚಿತ್ರದ ಮೊದಲರ್ಧದ ಬಿಗಿ ನಿರೂಪಣೆಗೆ ಆರ್.ಕೆ.ಸೆಲ್ವ ಸಂಕಲನದ ಸ್ಪರ್ಶ ನೋಡುಗರ ಕಣ್ಣಿಗೆ ಢಾಳಾಗಿ ರಾಚುತ್ತದೆ.

ಮಾರಿ ಸೆಲ್ವರಾಜರ ಮುಂದಿನ ಅಧ್ಯಾಯಕ್ಕೆ ನಾವೆಲ್ಲ ಕುತೂಹಲದಿಂದ ಕಾಯಬಹುದು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಕೆ.ಎಲ್.ಚಂದ್ರಶೇಖರ್ ಐಜೂರ್

contributor

Similar News