ದುಸ್ಸಾಹಸಕ್ಕೆ ಬಲಿಯಾದ 'ಬಾಬು'

Update: 2023-10-04 08:35 GMT

ಇದು ತಮಿಳು ನಟನೊಬ್ಬನ ಬದುಕಿನ ದುರಂತ ಕಥೆ.

ಅದು ತೊಂಭತ್ತರ ದಶಕ. ಆ ದಿನಗಳಲ್ಲಿ ಬಾಬು ನಾಲ್ಕು ತಮಿಳು ಚಿತ್ರಗಳಲ್ಲಿ ಮಾತ್ರ ನಟಿಸಿದ್ದರೂ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದ್ದರು. ಅವರು ಖ್ಯಾತ ಚಲನಚಿತ್ರ ನಿರ್ದೇಶಕ ಪದ್ಮಶ್ರೀ ಭಾರತಿರಾಜಾ ಅವರ ಚಿತ್ರದ ಮೂಲಕ 1990 ರಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದರು. ಹಲವು ಬ್ಲಾಕ್ ಬಸ್ಟರ್ ಚಿತ್ರಗಳ ನಿರ್ದೇಶಕ ಭಾರತಿರಾಜಾ ಹಲವಾರು ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದವರು. ಬಾಬು ಎಂಬ ಯುವ ಪ್ರತಿಭೆಯನ್ನ್ನೂ ‘ಎನ್ ಉಯಿರ್ ತೋಝನ್’ ಎಂಬ ಚಿತ್ರದ ಮೂಲಕ ಅವರು ನಾಯಕ ನಟನನ್ನಾಗಿಸಿದರು. ೧೯೯೦ರಲ್ಲಿ ತೆರೆ ಕಂಡ ಈ ಸಿನೆಮಾ ಅಷ್ಟೇನು ಯಶಸ್ಸು ಗಳಿಸದಿದ್ದರೂ ಬಾಬು ಯುವ ನಟನಾಗಿ ಗುರುತಿಸಿಕೊಂಡರು. ತನ್ನದೇ ನಟನಾ ಶೈಲಿ, ಮಾತು, ಹಾವಭಾವದಿಂದ ಅವರು ಪ್ರೇಕ್ಷಕರ ಗಮನಸೆಳೆಯುವಲ್ಲಿ ಸಫಲರಾಗಿದ್ದರು.

ಆ ಬಳಿಕ ಬಾಬು ನಿರ್ದೇಶಕ ವಿಕ್ರಮನ್ ನಿರ್ದೇಶನದ ‘ಪೆರುಂಪುಳ್ಳಿ’ ಚಿತ್ರದಲ್ಲಿ ನಟಿಸಿದರು. ಅದರ ಬೆನ್ನಲ್ಲೇ ‘ತಾಯಮ್ಮ’ ಸಿನೆಮಾವು ತೆರೆಗೆ ಬಂತು. ಬಾಬು ನಟಿಸಿ ಕೊನೆಯದಾಗಿ ಬಿಡುಗಡೆಗೊಂಡ ಚಿತ್ರ ‘ಪೊನ್ನುಕ್ಕು ಸೇದಿ ವಂದಾಚ್’. ಬಾಬು ನಟಿಸಿದ್ದು ಬೆರಳೆಣಿಕೆ ಚಿತ್ರಗಳಾದರೂ ಅವೆಲ್ಲವೂ ಗ್ರಾಮೀಣ ಕಥಾ ಹಂದರವಿರುವ ಸಿನೆಮಾಗಳಾಗಿದ್ದವು.

ಹೀಗೆ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದ ಬಾಬು ಐದನೇ ಸಿನೆಮಾವಾಗಿ ‘ಮನಸಾರ ವಾಳುತುಗಳೇನ್’(Manasara Vazhthungalen) ಆಯ್ಕೆ ಮಾಡಿಕೊಂಡಿದ್ದರು. ಪಾರ್ಥೇಪರಮನ್ ಆ ಚಿತ್ರದ ನಿರ್ದೇಶಕರಾಗಿದ್ದರು. ಅದು ಚಿತ್ರ ಸಾಹಸ ದೃಶ್ಯವೊಂದನ್ನು ಚಿತ್ರೀಕರಣ ಸೆಟ್. ಸ್ಟಂಟ್ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಚಿತ್ರದ ನಾಯಕ ಎತ್ತರದಿಂದ ಜಿಗಿಯುವ ದೃಶ್ಯವೊಂದಿತ್ತು. ಒಂದಿಷ್ಟು ಸಾಹಸಮಯವಾಗಿದ್ದ ಕಾರಣ ಆ ದೃಶ್ಯವನ್ನು ಡ್ಯೂಪ್ ಬಳಸಿ ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ನಡೆಸಿತ್ತು. ಆದರೆ ನೈಜ್ಯವಾಗಿರಲಿ ಎಂಬ ಕಾರಣಕ್ಕೆ ಬಾಬು ತಾನೇ ಸ್ವತಃ ಆ ಸ್ಟಂಟ್ ಮಾಡಲು ನಿರ್ಧರಿಸಿದರು. ಚಿತ್ರ ತಂಡ ಎಚ್ಚರಿಸಿದರೂ ತನ್ನ ನಿರ್ಧಾರದಲ್ಲಿ ರಾಜಿ ಮಾಡಿಕೊಳ್ಳದ ಬಾಬು ಅನಗತ್ಯವಾಗಿ ಆ ದುಸ್ಸಾಹಸಕ್ಕಿಳಿದರು. ಚಿತ್ರೀಕರಣ ಆರಂಭಗೊಂಡಿತು. ಬಾಬು ಎತ್ತರದಿಂದ ಜಿಗಿದರು. ಆದರೆ ಅವರಿಗೆ ನಿರೀಕ್ಷೆಯಂತೆ ಧುಮುಕಲು ಸಾಧ್ಯವಾಗಲಿಲ್ಲ. ಸಮತೋಲನ ಕಳೆದುಕೊಂಡ ಅವರು ನೆಲಕ್ಕಪ್ಪಳಿಸಿದರು. ಬಿದ್ದ ರಭಸಕ್ಕೆ ಅವರ ಬೆನ್ನುಹುರಿಗೆ ತೀವ್ರ ತರಹದ ಗಾಯವುಂಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹಲವು ಶಸ್ತ್ರಚಿಕಿತ್ಸೆಗೆ ಒಳಗಾದರೂ ಫಲ ಸಿಗಲಿಲ್ಲ. ಅಂದು ಹಾಸಿಗೆ ಹಿಡಿದ ಬಾಬು ಮತ್ತೆ ಮೊದಲಿನಂತಾಗಲೇ ಇಲ್ಲ. ಆದರೂ ಚಿತ್ರರಂಗದೊಂದಿಗೆ ನಂಟು ಕಡಿದುಕೊಳ್ಳಲು ಆಗಲಿಲ್ಲ. ೧೯೯೭ರಲ್ಲಿ ಚಿತ್ರವೊಂದಕ್ಕೆ ಬಾಬು ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದರು. ಆದರೆ ಆ ಚಿತ್ರ ತೆರೆಕಾಣಲೇ ಇಲ್ಲ.

ಬಳಿಕ ಬಾಬು ಸಂಪೂರ್ಣವಾಗಿ ತೆರೆಮರೆಗೆ ಸರಿದರು. ಶೂಟಿಂಗ್ ಅವಘಡದ ವೇಳೆ ಬಾಬುಗೆ ೩೦ರ ಹರೆಯ. ಅವರು ತನ್ನ ಬದುಕಿನ ಭಾಗಶಃ ಅರ್ಧ ಆಯಸ್ಸನ್ನು ಹಾಸಿಗೆಯಲ್ಲಿ ಕಳೆಯುಂತಾಯಿತು. ಕಳೆದ ಸೆಪ್ಟಂಬರ್ ೧೯ರಂದು ಕೊನೆಯುಸಿರೆಳೆದಾಗ ಬಾಬು ಅವರಿಗೆ ೬೦ ವರ್ಷ ಪ್ರಾಯವಾಗಿತ್ತು. ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ಯುವನಟನ ಬದುಕನ್ನು ಅದೊಂದು ಅಪಘಾತ ಕಿತ್ತುಕೊಂಡಿತ್ತು.

ಈ ನಡುವೆ ಬಾಬು ಜೀವನಕ್ಕೆ ಮುಳುವಾದ ‘ಮನಸಾರ ವಾಳುತುಗಳೇನ್’ ಸಿನೆಮಾ ಬಳಿಕ ತೆರೆಕಂಡಿತ್ತು. ಆದರೆ ಬಾಬು ನಟನೆಯಲ್ಲಿ ಅಲ್ಲ. ಬದಲಿಗೆ ಕನ್ನಡದ ನಟ ರಾಮ್ಕುಮಾರ್ ನಟನೆಯಲ್ಲಿ ಅದು ಮರು ಚಿತ್ರೀಕರಣಗೊಂಡು 1991ರ ಸೆಪ್ಟಂಬರ್ನಲ್ಲಿ ಬಿಡುಗಡೆಗೊಂಡು ಸಾಧಾರಣ ಪ್ರದರ್ಶನ ಕಂಡಿತ್ತು.

Writer - ವಾರ್ತಾಭಾರತಿ

contributor

Editor - Naufal

contributor

Byline - ಎ.ಎಂ.ಹನೀಫ್, ಅನಿಲಕಟ್ಟೆ

contributor

Similar News