ಅಡ್ಡೂರು ಮಿನಿ ಪಾಕಿಸ್ತಾನ ಎಂಬ ಶಾಸಕ ಭರತ್ ಶೆಟ್ಟಿ ಹೇಳಿಕೆ | ಗೃಹ ಇಲಾಖೆಯಿಂದ ನೋಟೀಸು ನೀಡಿ ಸ್ಪಷ್ಟನೆ ಕೇಳಲಿ: ಎಂ.ಜಿ. ಹೆಗಡೆ

Update: 2024-08-24 09:45 GMT

ಮಂಗಳೂರು, ಆ. 24: ಮರಳಿನ ವಿಚಾರದಲ್ಲಿ ಅಡ್ಡೂರು ಗ್ರಾಮವನ್ನು ಶಾಸಕ ಡಾ. ಭರತ್ ಶೆಟ್ಟಿಯವರು ಮಿನಿ ಪಾಕಿಸ್ತಾನ ಎಂಬ ಹೇಳಿಕೆಯನ್ನು ನೀಡುವ ಮೂಲಕ ದೇಶದ ಸಮಗ್ರತೆಯನ್ನು ಪ್ರಶ್ನಿಸಿದ್ದಾರೆ. ಕರ್ನಾಟಕ ಸರಕಾರದ ಗೃಹ ಇಲಾಖೆ ಅವರಿಗೆ ನೋಟೀಸು ನೀಡಿ, ಆ ಹೇಳಿಕೆಗೆ ವಿವರಣೆ ಕೇಳಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಜಿ. ಹೆಗಡೆ ಒತ್ತಾಯಿಸಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಮಿನಿ ಪಾಕಿಸ್ತಾನ ಇದೆ ಎಂದಾದರೆ ಅದಕ್ಕೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕಾರಣರಾಗುತ್ತಾರೆ. ದೇಶದ ಗುಪ್ತಚರ, ರಕ್ಷಣಾ ಖಾತೆ, ಸೈನಿಕರು, ಜತೆಗೆ ಗೃಹ ಖಾತೆ ಮಾತ್ರವಲ್ಲದೆ, ಪ್ರತಿಯೊಬ್ಬ ಭಾರತೀಯರಿಗೂ ಮಾಡಿದ ಅವಮಾನ. ಈ ಬಗ್ಗೆ ಶಾಸಕರು ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದರು.

ದೇಶದಲ್ಲಿ ಅಲ್ಲಿ ಇಲ್ಲಿ ಪಾಕಿಸ್ತಾನ ಎಂಬ ಸಂಘ ಪರಿವಾರದ ನಾಯಕರ ಹೇಳಿಕೆಗಳು ನಾಗರಿಕರಿಗೆ ಮಾಡುವ ಅವಮಾನ. ಚುನಾಯಿತ ಪ್ರತಿನಿಧಿಯಾಗಿ ಇಂತಹ ಹೇಳಿಕೆ ನೀಡಿರುವ ಶಾಸಕ ಭರತ್ ಶೆಟಿಯವರು ಈ ಬಗ್ಗೆ ಯಾವುದಾದರೂ ವರದಿಯನ್ನು ಸರಕಾರ, ಜಿಲ್ಲಾಡಳಿತದ ಗಮನ ತಂದಿದ್ದಾರೆಯೇ ? ಜಿಲ್ಲೆಯ ಸಂಸದರು ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಇದು ಬಾಲಿಶ ಹೇಳಿಕೆಯಾಗಿದ್ದರೆ, ಇಂತಹ ಭಾವನಾತ್ಮಕ ಪ್ರಚೋದನೆ ಯಾಕಾಗಿ ಮಾಡುತ್ತಿದ್ದಾರೆ ಎಂಬುದು ಜನರಿಗೆ ತಿಳಿಯಬೇಕು. ಕಳೆದ ಚುನಾವಣೆಯಲ್ಲಿ ಅಡ್ಡೂರಿನ ನಾಲ್ಕು ಬೂತ್‌ಗಳಲ್ಲಿ ಒಂದು ಸಾವಿರ ಮತಗಳನ್ನು ಭರತ್ ಶೆಟ್ಟಿ ಪಡೆದಿದ್ದಾರೆ. ಹಾಗಾದರೆ ಅವರಿಗೆ ಮತ ನೀಡಿದ ಅಡ್ಡೂರಿನ ಮತದಾರರು ಪಾಕಿಸ್ತಾನಿಯರೇ ? ಎಂದು ಎಂ.ಜಿ. ಹೆಗಡೆ ಪ್ರಶ್ನಿಸಿದರು.

ಕರಾವಳಿಯ 13 ಮಂದಿ ಶಾಸಕರಲ್ಲಿ ಮಂಗಳೂರು ಮತ್ತು ಸುರತ್ಕಲ್ ಕ್ಷೇತ್ರದ ಶಾಸಕರು ಮಾತ್ರ ಇಂತಹ ಹೇಳಿಕೆಗಳನ್ನು ನೀಡುತ್ತಿದಾರೆ. ತಮಗೆ ಮುಂದೆ ಸೀಟು ಸಿಗುವುದಿಲ್ಲ ಎಂಬುದು ಖಾತರಿಯಾಗಿ ಬಿಜೆಪಿಯ ಆಂತರಿಕ ರಾಜಕೀಯದಿಂದ ಈ ಇಬ್ಬರು ಶಾಸಕರು ವಿಚಲಿತಗೊಂಡು ಈ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇವರ ಈ ನಡವಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದಿದ್ದರೆ ನಮ್ಮ ಪಕ್ಷದ ಕಾರ್ಯಕರ್ತರು ನಿರುತ್ಸಾಹರಾಗುತ್ತಾರೆ. ನಾವು ನಮ್ಮ ಕಾರ್ಯಕರ್ತರಿಗೆ ಹಿಂಸಾತ್ಮಕ ಕ್ರಿಯೆಗಳಿಗೆ ಮುಂದಾಗದಂತೆ ಕಿವಿಮಾತು ಹೇಳುತ್ತಿರುತ್ತೇವೆ. ಆದರೆ ವಿಧಾನ ಪರಿಷತ್ ಸದಸ್ಯ ಐವನ್ ಮನೆಗೆ ಕಲ್ಲು ತೂರಾಟದ ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳುವ ಮೂಲಕ ಯುಕವರನ್ನು ಪ್ರಚೋದನೆಗೊಳಪಡಿಸುವ ಕಾರ್ಯ ಮಾಡುತ್ತಿದ್ದಾರೆ. ಅಹಿಂಸೆ, ಪ್ರೀತಿಯೇ ಮುಂದಿನ ಚಳವಳಿಯ ಮಾರ್ಗ ಎಂಬ ರಾಹುಲ್ ಗಾಂಧಿಯ ಹೇಳಿಕೆಗಳನ್ನು ನಮ್ಮ ಕಾರ್ಯಕರ್ತರಿಗೆ ತಿಳಿಸುತ್ತಿದ್ದೇವೆ. ಅದೇ ರೀತಿ ಬಿಜೆಪಿಯ ಕಾರ್ಯಕರ್ತರೂ ತಮ್ಮ ನಾಯಕರು ನೀಡುವ ಪ್ರಚೋದನೆಗೆ ಒಳಗಾಗಿ ತಪ್ಪು ಹೆಜ್ಜೆ ಇರಿಸದಂತೆ ನಾವು ಕಿವಿಮಾತು ಹೇಳುತ್ತಿದ್ದು, ರಾಜಕೀಯವನ್ನು ರಾಜಕೀಯವಾಗಿಯೇ ಎದುರಿಸಬೇಕು ಎಂದರು.

ಜನ ಪರ ಮತ್ತು ಅಭಿವೃದ್ಧಿಯ ವಿಚಾರಗಳನ್ನು ಹೊರತುಪಡಿಸಿ ಮತ್ತೆ ಮತ್ತೆ ಪುನರುಚ್ಚರಿಸಲು ನಮಗೂ ಹಿಂಸೆ ಯಾಗುತ್ತಿದೆ. ಆದರೆ ಪದೇ ಪದೇ ಪ್ರತಿಪಕ್ಷದಿಂದ ಇಂತಹ ಆರೋಪಗಳು ಬರುವಾಗ ಕೆಲವೊಂದು ಉತ್ತರ ನೀಡದಿರಲು ಆಗುವುದಿಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡುವಂತೆ ನಾವು ನಮ್ಮ ಶಾಸಕರನ್ನು ಭಿನ್ನವಿಸುತ್ತಲೇ ಬಂದಿದ್ದೇವೆ. ಶಬ್ಧಗಳ ಯುದ್ಧ ಕತ್ತಿಯೊಂದಿಗಿನ ಯುದ್ಧಕ್ಕೆ ಅವಕಾಶ ನೀಡಬಾರದು. ರಾಜಕಾರಣಿಗಳು ಈರೀತಿಯ ಬಾಲಿಶ ಹೇಳಿಕೆ ನೀಡುವುದರಿಂದ ಯುವಕರು ತಪ್ಪು ಹಾದಿ ತುಳಿಯಲು ಪ್ರಚೋದನೆ ನೀಡಿದಂತಾಗುತ್ತದೆ ಎಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು ಎಂದವರು ಹೇಳಿದು.

ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಯು.ಬಿ. ಇಬ್ರಾಹಿಂ, ಯಶವಂತ ಶೆಟ್ಟಿ, ಸುರೇಂದ್ರ ಕಂಬಳಿ ಮೊದಲಾದವರು ಉಪಸ್ಥಿತರಿದ್ದರು.


ಮರಳು ಮತ್ತು ಕೆಂಪು ಮಣ್ಣಿನ ಗಣಿಗಾರಿಕೆ ಬಗ್ಗೆ ಕಾಂಗ್ರೆಸ್ ವಿರುದ್ಧ ಡಾ. ಭರತ್ ಶೆಟ್ಟಿಯವರು ಆಪಾದನೆ ಮಾಡಿದ್ದಾರೆ. ಭರತ್ ಶೆಟ್ಟಿಯವರೇ ನಿಮ್ಮ ಸರಕಾರ ಇದ್ದಾಗ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ ಪ್ರಕರಣದಲ್ಲಿ 50 ಕೋಟಿ ರೂ. ಹಸಿರುಪೀಠದಿಂದ ದಂಡ ಹಾಕಲಾಗಿದೆ. ಆ ಗುತ್ತಿಗೆದಾರರು ಯಾರು ಎಂದು ನೀವು ಹೇಳಬೇಕು. ಬಜ್ಪೆಯಲ್ಲಿ ಕೆಂಪು ಮಣ್ಣಿನ ಗಣಿಗಾರಿಕೆ ಬಗ್ಗೆ 10 ದಿನಗಳ ಹಿಂದೆ ಪ್ರಕರಣ ದಾಖಲಾಗಿದ್ದು, ಅದರ ಗುತ್ತಿಗೆದಾರರು ಎಂಬ ಬಗ್ಗೆಯೂ ನೀವು ಮಾಹಿತಿ ಒದಗಿಸಬೇಕು. ಅದ್ಯಪಾಡಿಯಲ್ಲಿ ಸಾಮಾಜಿಕ ಹೋರಾಟಗಾರರೊಬ್ಬರು ಮರಳುಗಾರಿಕೆ ವಿರುದ್ಧ ಹೋರಾಟ ಮಾಡಿ ಅದು ರೈಲ್ವೇ ಸಚಿವರಿಗೆ ದೂರು ಸಲ್ಲಿಕೆಯಾಗಿದೆ. ಮಾತ್ರವಲ್ಲದೆ, ಗುರುಪುರ ಸೇತುವೆಯ ಎರಡೂ ಕಡೆ ಮರಳನ್ನು ಅಕ್ರಮವಾಗಿ ರಾಶಿ ಹಾಕಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ. ಈ ಬಗ್ಗೆ ಯಾವ ಕ್ರಮವನ್ನು ಶಾಸಕರಾಗಿ ನೀವು ಮಾಡಿದ್ದೀರಿ ಎಂದು ತಿಳಿಸಿ ಎಂದು ಎಂ.ಜಿ. ಹೆಗಡೆ ಸವಾಲೆಸೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News