ಬಜ್ಪೆ: ಗಾಂಜಾ ಸಾಗಾಟ ಆರೋಪ; ಮೂರು ಮಂದಿ ಸೆರೆ
ಬಜ್ಪೆ, ನ.18: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳದ ತಾರಿಪಡ್ಪು ಸರಕಾರಿ ಶಾಲೆ ಬಳಿಯ ನಿವಾಸಿ ತೇಜಾಕ್ಷ ಪೂಜಾರಿ ಯಾನೆ ತೇಜು(22), ಬಂಟ್ವಾಳ ತಾಲೂಕಿನ ಪಲ್ಲಮಜಲು ಶ್ರೀರಾಮ ಬಜನಾ ಮಂದಿರ ಬಳಿಯ ನಿವಾಸಿ ಸಂತೋಷ್ ಪೂಜಾರಿ ಯಾನೆ ಸಂತು(24), ಮಂಗಳೂರು ತಾಲೂಕಿನ ತೆಂಕ ಎಡಪದವು 5ಸೆನ್ಸ್ ನಿವಾಸಿ ಸಿದ್ದೀಕ್(26) ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ 340 ಗ್ರಾಂ ಗಾಂಜಾ, 40 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ಸೇರಿ ಒಟ್ಟು 46 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನ.17ರಂದು ತಡ ರಾತ್ರಿ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈಕಂಬ ಪೊಳಲಿ ದ್ವಾರದ ಬಳಿ ರಾತ್ರಿ ಗಸ್ತಿನಲ್ಲಿದ್ದ ಪಿಎಸೈ ಗುರುಕಾಂತಿ ಅವರು ಅಡ್ಡೂರು ಕಡೆಗೆ ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಸಂಚರಿಸುತ್ತಿದ್ದುದನ್ನು ಗಮನಿಸಿದ ವಾಹನ ನಿಲ್ಲಿಸಲು ಸೂಚನೆ ನೀಡಿದ್ದಾರೆ.
ಈ ವೇಳೆ ಆರೋಪಿಗಳು ವಾಹನ ನಿಲ್ಲಿಸದೆ ಪರಾರಿಯಾಗಿದ್ದಾರೆ. ಅವರನ್ನು ಬೆನ್ನಟ್ಟಿ ಹಿಡಿದ ಪೊಲೀಸರು ವಿಚಾರಿಸಿದಾಗ ದ್ವಿಚಕ್ರ ವಾಹನದ ಸೀಟಿನ ಅಡಿಯಲ್ಲಿ ಗಾಂಜಾ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮೂವರನ್ನು ವಶಕ್ಕೆ ಪಡೆದ ಬಜ್ಪೆ ಪೊಲೀಸರು ಆರೋಪಿಗಳ ವಿರುದ್ಧ ಮಾದಕ ವಸ್ತು ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಬಜ್ಪೆ ಪೊಲೀಸರು ಮಾಹಿತಿ ನೀಡಿದ್ದಾರೆ.