ಬಜ್ಪೆ: ಅದ್ಯಪಾಡಿಯ ನೆರೆ ಹಾವಳಿ ಪ್ರದೇಶಗಳಿಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಮಂಗಳೂರು, ಆ.2: ನೆರೆ ಹಾವಳಿ ಪ್ರದೇಶವಾಗಿರುವ ಬಜ್ಪೆಯ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದ್ಯಪಾಡಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಇಂದು ಬೆಳಗ್ಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸಿದರು.
ಅದ್ಯಪಾಡಿಯ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು ಸ್ಥಳೀಯರ ಅಹವಾಲು ಆಲಿಸಿದರು.
ಕಳೆದ ಹನ್ನೊಂದು ವರ್ಷಗಳ ಈಚೆಗೆ ಮರವೂರು ಕಿಂಡಿ ಅಣೆಕಟ್ಟು ನಿರ್ಮಾಣ ಆದ ಬಳಿಕ ಮಳೆಗಾಲದಲ್ಲಿ ಅದ್ಯಪಾಡಿಯಿಂದ ಮೂಡು ಶೆಡ್ಡೆಯ ಸಂಪರ್ಕ ರಸ್ತೆ ಪ್ರತಿ ಬಾರಿ ನೆರೆಗೆ ಮುಳುಗಡೆ ಆಗುತ್ತಿದೆ. ಕೃಷಿ ಭೂಮಿಯೂ ನೀರಿನಲ್ಲಿ ತುಂಬುತ್ತಿವೆ ಎಂದು ಅದ್ಯಪಾಡಿ ಜನತೆ ಸಚಿವರ ಗಮನಕ್ಕೆ ತಂದರು.
ತೋಟ ಗದ್ದೆಗಳು ಮುಳುಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಸಚಿವ ದಿನೇಶ್ ಗುಂಡೂರಾವ್, ಅದ್ಯಪಾಡಿಯ ಅಕ್ಕ ಪಕ್ಕದ ಹಳ್ಳಿಗಳಿಗೆ ಫಲ್ಗುಣಿ ನದಿ ನೆರೆ ಹಾವಳಿ ತಡೆಯಲು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರಿಂದ ವರದಿ ಪಡೆದು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಹ ಬಂದಿರುವ ಈ ಸಂದರ್ಭದಲ್ಲೇ ತಂತ್ರಜ್ಞರನ್ನ ಸ್ಥಳಕ್ಕೆ ಕರೆಸಿ ಸಲಹೆ ಪಡೆಯುವಂತೆ ಉಸ್ತುವಾರಿ ಸಚಿವರು ಸೂಚಿಸಿದರು.
ನೆರೆ ಪರಿಹಾರ ಪಡೆಯಲು ನಿರಾಕರಿಸಿದ ಗ್ರಾಮಸ್ಥರ ಮನವೊಲಿಸಿದ ಸಚಿವರು
ಈ ವೇಳೆ ಸಂತ್ರಸ್ತರಿಗೆ ನೆರೆ ಪರಿಹಾರ ನೀಡಲು ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದಾಗ ಪರಿಹಾರ ಬೇಡ, ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದ ಘಟನೆ ನಡೆಯಿತು.
ಈ ವೇಳೆ ಮಾತನಾಡಿದ ಸಚಿವರು, ನೆರೆ ಪರಿಹಾರಕ್ಕೂ ಶಾಶ್ವತ ಪರಿಹಾರಕ್ಕೂ ಸಂಬಂಧವಿಲ್ಲ. ನೆರೆ ಪರಿಹಾರ ಪಡೆದರೆ ಶಾಶ್ವತ ಪರಿಹಾರ ಆಗುವುದಿಲ್ಲ ಎಂಬ ಭಾವನೆ ಬೇಡ. ಭತ್ತದ ಗದ್ದೆ, ತೋಟ ಮುಳುಗಡೆಯಿಂದ ನಷ್ಟ ಅನುಭವಿಸಿದ್ದೀರಾ.. ಅದಕ್ಕೆ ಸರ್ಕಾರದಿಂದ ಸಿಗುವ ನೆರೆ ಪರಿಹಾರ ಪಡೆಯಿರಿ. ಫಲ್ಗಣಿ ನದಿಯಿಂದಾಗುವ ನೆರೆ ಹಾವಳಿ ತಡೆಯುವ ಶಾಶ್ವತ ಪರಿಹಾರ ಒದಗಿಸುವ ಜವಾಬ್ದಾರಿ ನಮಗೆ ಬಿಡಿ ಎಂದು ಗ್ರಾಮಸ್ಥರ ಮನವೊಲಿಸಿದರು.
ಈ ವೇಳೆ ಜಿಲ್ಲಾಡಳಿತದ ಅಧಿಕಾರಿಗಳು ತಮ್ಮ ಸಮಸ್ಯೆಗೆ ಉತ್ತಮವಾಗಿ ಸ್ಪಂದಿಸುವುದಾಗಿ ಸ್ಥಳೀಯರು ಸಚಿವರಿಗೆ ತಿಳಿಸಿದರು.
ಸಚಿವರ ಜೊತೆ ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ, ವಿನಯ್ ರಾಜ್, ಅನಿಲ್ ಕುಮಾರ್, ಸುರೇಂದ್ರ ಕಾಂಬ್ಳಿ, ಜಿಪಂ ಸಿಇಒ ಡಾ.ಆನಂದ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಮನಪಾ ಆಯುಕ್ತ ಆನಂದ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಝ್ಮಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.