ಬೆಳ್ತಂಗಡಿ: ‘ಟೆಲಿಗ್ರಾಂ’ನಲ್ಲಿ ಬೆದರಿಸಿ ಶಿಕ್ಷಕಿಯಿಂದ 1 ಲಕ್ಷ ರೂ. ಸುಲಿಗೆ ನಡೆಸಿದ ಆರೋಪಿಯನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ ಪೊಲೀಸರು

Update: 2023-08-03 18:38 GMT

ಬೆಳ್ತಂಗಡಿ, ಆ.3: ಸಾಮಾಜಿಕ ಜಾಲತಾಣ ‘ಟೆಲಿಗ್ರಾಂ’ ಮೂಲಕ ಸಂದೇಶ ಕಳುಹಿಸಿ ಶಿಕ್ಷಕಿಯೊಬ್ಬರನ್ನು ಬೆದರಿಸಿ ಒಂದು ಲಕ್ಷ ರೂ. ವಸೂಲಿಗೈದಿದ್ದ ಆರೋಪಿಯೊಬ್ಬನನ್ನು ಸಿನಿಮೀಯ ಶೈಲಿಯಲ್ಲಿ ವೇಣೂರು ಪೊಲೀಸರು ಸೆರೆ ಹಿಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಂಟ್ರಿಂಜ ನಿವಾಸಿ ಅಶ್ವತ್ಥ್ ಹೆಬ್ಬಾರ್ (23) ಬಂಧಿತ ಆರೋಪಿ.

ಘಟನೆಯ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ನಿವಾಸಿ, ಪೆರೋಡಿತ್ತಾಯಕಟ್ಟೆ ಶಾಲೆಯ ಶಿಕ್ಷಕಿ ಜ್ಯೋತಿ ಎಂಬವರಿಗೆ ಮೂರು ಲಕ್ಷ ರೂ. ನೀಡುವಂತೆ ಟೆಲಿಗ್ರಾಂ ನಕಲಿ ಖಾತೆಯ ಮೂಲಕ ವ್ಯಕ್ತಿಯೋರ್ವ ಬೇಡಿಕೆ ಇಟ್ಟು ಹಣ ನೀಡದಿದ್ದರೆ ಪತಿಯನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಜ್ಯೋತಿ ವೇಣೂರು ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯಾ ಜೆ. ನೇತೃತ್ವದ ತಂಡ ಆರೋಪಿಯ ಪತ್ತೆ ಕಾರ್ಯಾಚರಣೆಗಿಳಿದಿತ್ತು.

ಪೊಲೀಸರ ಸೂಚನೆಯಂತೆ ಜ್ಯೋತಿ ಒಂದು ಲಕ್ಷ ರೂ. ನೀಡುವುದಾಗಿ ಆರೋಪಿಯನ್ನು ಟೆಲಿಗ್ರಾಂ ಸಂದೇಶ ಕಳುಹಿಸಿ ಒಪ್ಪಿಸಿದ್ದರು. ಅದರಂತೆ ಆರೋಪಿ ಬುಧವಾರ ಸಂಜೆ ಅಳದಂಗಡಿ ಕೆದ್ದು ಸಮೀಪ ಹಣ ಎಸೆದು ಹೋಗುವಂತೆ ಸೂಚಿಸಿದ್ದ. ಬಳಿಕ ಅಲ್ಲಿ ಬೇಡ ಎಂದು ಸಂದೇಶ ರವಾನಿಸಿ ಬೇರೊಂದು ಸ್ಥಳ ಸೂಚಿಸಿದ್ದ. ಹೀಗೆ 3-4 ಬಾರಿ ಸ್ಥಳವನ್ನು ಬದಲಾಯಿ ಸುತ್ತಾ ಮೆಸೇಜ್ ಮಾಡುತ್ತಿದ್ದ. ಕೊನೆಗೆ ಆರೋಪಿ ಶಿರ್ಲಾಲು ಸವಣಾಲು ಕ್ರಾಸ್ ಬಳಿ ಹಣವನ್ನು ವಾಹನದಿಂದ ಎಸೆದು ಹೋಗುವಂತೆ ಸೂಚಿಸಿದ್ದಾನೆನ್ನಲಾಗಿದೆ. ಅದರಂತೆ ಜ್ಯೋತಿ ಹಣದ ಕಟ್ಟನ್ನು ಎಸೆದು ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಹಣವನ್ನು ಹೆಕ್ಕಿಕೊಳ್ಳುತ್ತಿದ್ದಂತೆ ಮೊದಲೇ ಕಾದು ಕುಳಿತಿದ್ದ ಪೊಲೀಸರು ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ ಆರೋಪಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ. ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ತಡರಾತ್ರಿ ಆತನನ್ನು ಗುಂಡೇರಿ ಸಮೀಪ ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಆರೋಪಿಯಿಂದ ಒಂದು ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News