ಬೆಳ್ತಂಗಡಿ | ಏಕಾಏಕಿ ಏರಿದ ನದಿಗಳ ನೀರು ; ಭೂಕುಸಿತದ ಶಂಕೆ

Update: 2024-08-19 15:57 GMT

ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆ ಕಡಿಮೆಯಾಗಿ ಶಾಂತವಾಗಿದ್ದ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಲ್ಲಿ ಏಕಾಏಕಿ ನೀರು ಉಕ್ಕಿ ಹರಿದು ಸೋಮವಾರ ಸಂಜೆ ಪ್ರವಾಹದ ಪರಿಸ್ಥಿತಿ ಕಂಡು ಬಂತು.

ತಾಲೂಕಿನಾದ್ಯಂತ ಹೆಚ್ಚಿನ ಮಳೆ ಇಲ್ಲದಿದ್ದರೂ ಈ ನದಿಗಳ ಉಗಮ ಸ್ಥಾನದಲ್ಲಿ ಭಾರಿ ಮಳೆಯಾಗಿರುವ ಸಾಧ್ಯತೆ ಇದ್ದು ನದಿಗಳಲ್ಲಿ ಪ್ರವಾಹದಂತೆ ನೀರು ಹರಿದಿದೆ.

ಜುಲೈ ತಿಂಗಳಲ್ಲಿ ಆಗಾಗ ಸಾಮಾನ್ಯ ಪ್ರವಾಹ ಸ್ಥಿತಿಯಲ್ಲಿ ಹರಿದ ಈ ನದಿಗಳು ಮತ್ತೆ ಸೋಮವಾರ ಪ್ರವಾಹದ ಭೀತಿ ಸೃಷ್ಟಿಸಿದವು ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಸೋಮವಾರ ಮಧ್ಯಾಹ್ನ ಸಾಮಾನ್ಯ ಮಳೆಯಾಗಿತ್ತು ಆದರೆ ಸಂಜೆ 5ರ ವೇಳೆಗೆ ನದಿಗಳು ಏಕಾಏಕಿ ತುಂಬಿ ಹರಿಯ ತೊಡಗಿದವು.

ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು ಮೊದಲಾದ ಕಡೆ ನದಿ ನೀರು ದಡಮೀರಿ ಹರಿದಿದ್ದು ಹೆಚ್ಚಿನ ತೋಟಗಳಿಗೆ ಪ್ರವಾಹದ ನೀರು ನುಗ್ಗಿದೆ. ಕಡಿರುದ್ಯಾವರದಿಂದ 10 ಕಿಮಿ ದೂರದಲ್ಲಿರುವ ಬಂಡಾಜೆ ಜಲಪಾತ ತುಂಬಿ ಹರಿಯುವ ದೃಶ್ಯ ಕಡಿರುದ್ಯಾವರದಲ್ಲಿ ಗೋಚರಿಸುತ್ತಿತ್ತು.

ಜನರಲ್ಲಿ ಭೀತಿ

ಮಳೆ ಇಲ್ಲದಿದ್ದರೂ ನದಿಗಳಲ್ಲಿ ಪ್ರವಾಹದಂತೆ ಹರಿದುಬಂದ ನೀರು ಕಂಡ ನದಿ ಪಾತ್ರಗಳಲ್ಲಿ ವಾಸಿಸುವ ಜನರು ಭೀತಿ ಗೊಳಗಾದರು. ಹಲವರು ತಮ್ಮ ವಾಸ್ತವ್ಯ ಬದಲಿಸಿದರು. ರಾತ್ರಿ 8:30ರ ಹೊತ್ತಿಗೆ ನದಿ ನೀರು ಇಳಿಕೆಯಾಗ ತೊಡಗಿತು. ಇದು ಈ ವರ್ಷ ಎರಡು ನದಿಗಳಲ್ಲಿ ಹರಿದ ಅತಿ ಹೆಚ್ಚಿನ ನೀರಿನ ಪ್ರಮಾಣವಾಗಿದೆ.

ಭೂ ಕುಸಿತದ ಅನುಮಾನ

ನದಿ ನೀರು ಸಂಪೂರ್ಣವಾಗಿ ಕೆಸರುಮಯವಾಗಿತ್ತು. ನೀರಿನ ವೇಗವೂ ತೀರಾ ಹೆಚ್ಚಾಗಿತ್ತು. ನದಿನೀರಿನಲ್ಲಿ ದೊಡ್ಡ ಮಟ್ಟ ದಲ್ಲಿ ಮರ‌ಮಟ್ಟುಗಳು ತೇಲಿ ಹೋಗುತ್ತಿರುವುದನ್ನು ಗಮನಿಸಿದರೆ ನದಿಗಳ ಉಗಮ ಪ್ರದೇಶದಲ್ಲಿ ಅರಣ್ಯದ ನಡುವೆ ಭೂಕುಸಿತಗೊಂಡಿರುವ ಅನುಮಾನ ವ್ಯಕ್ತವಾಗಿದೆ. ಸವಣಾಲಿನಲ್ಲಿ ನದಿಯಲ್ಲಿ ಮಣ್ಣು ಮಿಶ್ರಿತ ಕಪ್ಪು ಬಣ್ಣದ ನೀರು ಹರಿದಿದ್ದು ನದಿ ನೀರು ದುರ್ಗಂಧದಿಂದ ಕೂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಿತ್ತಬಾಗಿಲು ಗ್ರಾಮದ ಗಣೇಶನಗರ, ಚಾರ್ಮಾಡಿ ಸೇರಿದಂತೆ ಹಲವು ಅಪಾಯಕಾರಿ ಪ್ರದೇಶಗಳಲ್ಲಿ ಶಾಲಾ ಮಕ್ಕಳನ್ನು ಸ್ಥಳೀಯರು ಸುರಕ್ಷಿತವಾಗಿ ಮನೆಗಳಿಗೆ ತಲುಪಿಸಿದರು. ಇಲ್ಲಿನ ಹಲವಾರು ತೋಡು, ಕಿರು ಸೇತುವೆಗಳು, ಕಿಂಡಿ ಅಣೆಕಟ್ಟು ಗಳು ಜಲಾವೃತವಾದ ಕಾರಣ ಶಾಲಾ ಮಕ್ಕಳು ಸುತ್ತು ಬಳಸಿದ ದಾರಿಯಲ್ಲಿ ಮನೆಗೆ ಸಾಗುವುದು ಅನಿವಾರ್ಯವಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News