ದೇರಳಕಟ್ಟೆ: ನಿಟ್ಟೆ ಪರಿಗಣಿತ ವಿವಿಯ 13ನೇ ಘಟಿಕೋತ್ಸವ

Update: 2023-11-05 10:50 GMT

 ಕೊಣಾಜೆ: ನಮ್ಮ ಉದ್ದೇಶಿತ ಗುರಿಗಳನ್ನು ತಲುಪಲು ಮತ್ತು ಅವುಗಳಲ್ಲಿ ಯಶಸ್ಸು ಸಾಧಿಸಲು ನಮ್ಮ ಶಿಕ್ಷಣ , ಕೌಶಲ್ಯ ಸಾಮರ್ಥ್ಯವು ಪ್ರಮುಖವಾದುದು. ಹಾಗೆಯೇ ನಾವು ಗಳಿಸಿದ ಪದವಿಯು ನಮಗೆ ಭವಿಷ್ಯದ ಉತ್ತಮ ಜೀವನ ಕಲ್ಪಿಸಲು ಪೂರಕವಾಗಿರಬೇಕು ಎಂದು ಹ್ಯಾರಿಸ್ ಬರ್ಗ್ ನ ಪೆನ್ಸಿಲ್ವೇನಿಯಾ ಸ್ಟೇಟ್ ಯುನಿವರ್ಸಿಟಿಯ ಅಂತರಾಷ್ಟ್ರೀಯ ವ್ಯವಹಾರಗಳ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಡಾ.ಒಮಿದ್ ಅನ್ಸಾರಿ ಅಭಿಪ್ರಾಯಪಟ್ಟರು.

ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ 13ನೇ ಘಟಿಕೋತ್ಸವದಲ್ಲಿ ಅವರು ಪದವಿ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಿದರು.

 

ವೈದ್ಯಕೀಯ ಕ್ಷೇತ್ರದಲ್ಲಿ ಇಂದು ಅನೇಕ ಅವಕಾಶಗಳಿವೆ ಹಾಗೂ ಅನೇಕ ಸವಾಲುಗಳೂ ಇವೆ. ಪದವೀಧರರ ನಿರಂತರ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂಬಂತೆ ಇಂದಿನ ದಿನ ಪದವಿ ಗಳಿಸಲು ಸಾಧ್ಯವಾಗಿಸಿದೆ. ಇದು ಸಾಧನೆಯ ತೃಪ್ತಿ ಕಾಣಲು ಹಾಗೂ ಮುಂದಿನ ಶೈಕ್ಷಣಿಕ ಜೀವನದಲ್ಲಿ ಮಹತ್ತರವಾದುದನ್ನು ಸಾಧಿಸಲು ಪೂರಕವಾಗಿದೆ. ಎಂದು ಹೇಳಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

 

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮತ್ತು ಕರ್ನಾಟಕದ ಮಾನ್ಯ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಕಾನೂನು ಕ್ಷೇತ್ರಕ್ಕೆ ನೀಡಿದ ಅತ್ಯುನ್ನತ ಕೊಡುಗೆಗಳಿಗಾಗಿ ಮತ್ತು ಆಲ್‌ಕಾರ್ಗೋ ಗ್ರೂಪ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕ ಶಶಿಕಿರಣ್ ಶೆಟ್ಟಿ ಅವರಿಗೆ ವ್ಯಾಪಾರ ಜಗತ್ತಿನಲ್ಲಿನ ಗಮನಾರ್ಹ ಸಾಧನೆಗಳಿಗಾಗಿ ಡಾಕ್ಟರ್ ಆಫ್ ಸೈನ್ಸ್ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಆಸ್ಪತ್ರೆ ನಿರ್ವಹಣೆ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಂ ಶೆಟ್ಟಿ, ಆಡಳಿತ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಪ್ರೊ. ಡಾ. ಪ್ರಸಾದ್ ಬಿ. ಶೆಟ್ಟಿ ಹಾಗೂ ವಿವಿಯ ವೈದ್ಯಕೀಯ, ದಂತ ವೈದ್ಯಕೀಯ, ಫಿಸಿಯೋಥೆರಪಿ, ನರ್ಸಿಂಗ್, ಔಷಧೀಯ ವಿಜ್ಞಾನ ವಿದ್ಯಾಲಯ ಸೇರಿದಂತೆ ಎಲ್ಲ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.

 

ನಿಟ್ಟೆ ವಿವಿ ಕುಲಪತಿ ಪ್ರೊ.ಎಂ.ಎಸ್. ಮೂಡಿತ್ತಾಯ ಸ್ವಾಗತಿಸಿದರು. ಕ್ಷೇಮ ಡೀನ್ ಡಾ. ಪಿ.ಎಸ್. ಪ್ರಕಾಶ್, ಡಾ. ಯು.ಎಸ್. ಕೃಷ್ಣ ನಾಯಕ್, ಡಾ. ಫಾತಿಮ ಡಿಸಲ್ವ, ಡಾ. ಧನೇಶ್, ಡಾ. ಅನಿರ್ಬನ್ ಚಕ್ರಬರ್ತಿ, ಡಾ.‌ ರವಿರಾಜ್ ಕಿಣಿ ಸೇರಿದಂತೆ ವಿಭಾಗ ಮುಖ್ಯಸ್ಥರು ಪದವೀಧರರ ಹೆಸರು ವಾಚಿಸಿದರು. ಎಲುಬು ಮತ್ತು ಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಸಿದ್ದಾರ್ಥ ಕಾರ್ಯಕ್ರಮ ನಿರೂಪಿಸಿದರು.

1254ವಿದ್ಯಾರ್ಥಿಗಳಿಗೆ ಹಾಗೂ 25 ಪಿಎಚ್ ಡಿ ಪದವಿಗಳನ್ನು ಪ್ರದಾನ ಮಾಡಲಾಯಿತು.

ವೈದ್ಯಕೀಯ, ದಂತ ವೈದ್ಯಕೀಯ, ಔಷಧವಿಜ್ಞಾನ, ಶುಷ್ರೂಷೆ, ಜೀವ ವಿಜ್ಞಾನಗಳು, ಸಮಗ್ರ ಆರೋಗ್ಯ ವಿಜ್ಞಾನಗಳು, ಮಾನವಿಕ ಹಾಗೂ ವಾಸ್ತುಶಿಲ್ಪ ವಿಷಯಗಳಲ್ಲಿ ಡಾಕ್ಟೊರಲ್, ಸ್ನಾತಕೋತ್ತರ, ಫೆಲೋಷಿಪ್, ಸ್ನಾತಕೋತ್ತರ ಡಿಪ್ಲೊಮಾ, ಪದವಿ ಪ್ರದಾನ ಮಾಡಲಾಯಿತು.

ವಿವಿಧ ವಿಷಯಗಳಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿರುವ 31 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು.

 

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News