1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ | ಅಂದಿನ ಐಕ್ಯತೆಯ ಬಲಿದಾನ ಯುವಜನತೆ ಅರಿಯಬೇಕಿದೆ: ಡಾ. ಶಂಸುಲ್ ಇಸ್ಲಾಂ

Update: 2023-09-09 16:23 GMT

ಮಂಗಳೂರು, ಸೆ. 9: ಬ್ರಿಟಿಷರನ್ನು ದೇಶದಿಂದ ಓಡಿಸುವ ನಿಟ್ಟಿನಲ್ಲಿ 1857ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಹೋರಾಟದ ಐಕ್ಯತೆಯ ಬಲಿದಾನದ ದಾಖಲೆಗಳು ಇಂದಿನ ಯುವಜನತೆಗೆ ತಲುಪಬೇಕಾಗಿದೆ. ಜಾತಿ, ಧರ್ಮ ಬೇಧವಿಲ್ಲದೆ ಬ್ರಿಟಿಷರ ವಿರುದ್ಧದ ದಂಗೆಯಲ್ಲಿ ಬಲಿದಾನಗೈದ, ನಾವು ಮರೆತಿರುವ ದೇಶದ ಹೀರೋಗಳನ್ನು ಸಮಾಜ ಗುರುತಿಸಬೇಕಾಗಿದೆ ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ನಿವೃತ್ತ ಸಹ ಪ್ರಾಧ್ಯಾಪಕ ಡಾ. ಶಂಸುಲ್ ಇಸ್ಲಾಂ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಸ್ವಾತಂತ್ರ ಹೋರಾಟಗಾರ ಬಿ.ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸದ ಅಂಗವಾಗಿ ಅವರು ‘ಮೊದಲ ಸ್ವಾತಂತ್ರ ಸಂಗ್ರಾಮ, 1857- ಜಂಟಿ ಬಲಿದಾನಗಳು ಜಂಟಿ ವಾರಿಸುದಾರಿಕೆ’ ಎಂಬ ವಿಷಯದಲ್ಲಿ ಅವರು ತಮ್ಮ ಸಂಶೋಧನಾತ್ಮಕ ಮಾಹಿತಿಗಳನ್ನು ಹಂಚಿಕೊಂಡರು.

ಉಪನ್ಯಾಸದ ಆರಂಭದಲ್ಲೇ ಇಸ್ಲಾಂ ಶಂಸುಲ್ ಅವರು, ‘ನಾನು ನನ್ನ ದಾಖಲೆಯುಕ್ತ ಬರವಣಿಗೆಯನ್ನು ಓದುಗರಿಗೆ ನಿರ್ಧರಿಸಲು ಬಿಟ್ಟಿದ್ದೇನೆಯೇ ಹೊರತು ಯಾವತ್ತೂ ನನ್ನ ಬರಹಗಳ ಬಗ್ಗೆ ತೀರ್ಪು ನೀಡಿಲ್ಲ. ಕರ್ನಾಟಕ ಸೇರಿದಂತೆ ದೇಶದ ಸಾವಿರಾರು ಹುತಾತ್ಮರು ಆ ಸಂಗ್ರಾಮದಲ್ಲಿ ಬಲಿದಾನಗೈದಿದ್ದಾರೆ. ಅಂತಹವರನ್ನು ನಾವು ತಿಳಿಯಬೇಕಾಗಿದೆ’ ಎಂದರು.

ಇತಿಹಾಸದಿಂದ ಮರೆಯಾಗಿರುವ ಪ್ರಥಮ ಸ್ವಾತಂತ್ರ ಸಂಗ್ರಾಮದ ಹೀರೋಗಳ ಬಲಿದಾನದ ವಿವರವನ್ನು ನಾನು ದಾಖಲೆಗಳ ಮೂಲಕ ಜನರ ಮುಂದಿಡುವ ಪ್ರಯತ್ನ ನಡೆಸುತ್ತಿದ್ದೇನೆ. ಇವರು ಹುತಾತ್ಮರು ಅಲ್ಲ ಎಂದಾದರೆ ಇವರ ವಿರುದ್ಧ ಪ್ರಕರಣ ದಾಖಲಿಸಲಿ. ಪ್ರತಿಭಟಿಸುವವರು, ವಿರೋಧಿಸುವವರು ಇದರ ವಿರುದ್ಧ ಹೋರಾಟ ನಡೆಸಲಿ ಎಂದು ಸವಾಲೆಸೆದ ಡಾ. ಶಂಸುಲ್ ಇಸ್ಲಾಂ, ಹಿಂದುತ್ವವಾದಿಗಳು ಮುಸ್ಲಿಮರ ವಿರೋಧಿಗಳು ಎಂಬುದು ತಪ್ಪು ಗ್ರಹಿಕೆ. ವಾಸ್ತವದಲ್ಲಿ ಹಿಂದುತ್ವವಾದಿಗಳು ಪ್ರಜಾಪ್ರಭುತ್ವ ವಿರೋಧಿಗಳು. ಹಿಂದುತ್ವವಾದಿಗಳು ಮುಸ್ಲಿಮರನ್ನು ಕೊಂದಿಲ್ಲ. ಬದಲಾಗಿ ಮಹಾತ್ಮಗಾಂಧಿ, ಕಲಬುರ್ಗಿ, ಪನ್ಸಾರೆ, ನರೇಂದ್ರ ದಾಬೋಲ್ಕರ್, ಗೌರಿ ಮೊದಲಾದವರನ್ನು ಕೊಂದಿರುವುದು ಎಂದರು.

1857ರಿಂದ ನಡೆದ ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರ ಸೇನೆಯಲ್ಲಿ ದಂಗೆ ಎದ್ದವರಲ್ಲಿ ಶೇ. 80ರಷ್ಟು ಹಿಂದೂಗಳು, ಸುಮಾರು ಶೇ. 20ರಷ್ಟು ಮುಸಲ್ಮಾನರು. ಅವರ್ಯಾರು ಆ ತಮ್ಮ ಹೋರಾಟದ ವೇಳೆ ಜಾತಿ, ಧರ್ಮಕ್ಕಾಗಿ ಕಿತ್ತಾಡಿದ ಅಪಸ್ವರ ಎತ್ತಿರುವುದು ಕಂಡು ಬಂದಿಲ್ಲ. ಬ್ರಿಟಿಷರನ್ನು ದೇಶದಿಂದ ಓಡಿಸುವ ಕಾರ್ಯಕ್ಕಾಗಿ ಆ ಸಂಗ್ರಾಮದ ಮುಂಚೂಣಿಯಲ್ಲಿದ್ದವರು, ಆ ಸಮಯದಲ್ಲಿ ದುರ್ಬಲ ರಾಜನಾಗಿದ್ದ ಬಹಾದೂರ್ ಶಾ ಜಬ್ಬಾರ್ ಎಂಬನಲ್ಲಿಗೆ ಹೋಗಿ ನಾಯಕತ್ವ ಕೋರುತ್ತಾರೆ. ಇದು ನಮ್ಮ ದೇಶದ ಸೌಹಾರ್ದತೆಯ ಸಂಕೇತ. ತನ್ನ ಪಾಡಿಗೆ ತಾನಿದ್ದ ಆ ದುರ್ಬಲ ರಾಜ ಕೂಡಾ ಅಂದು ಒತ್ತಡಕ್ಕೆ ಮಣಿದು ಹೋರಾಟಕ್ಕೆ ಮುಂದಾಗುತ್ತಾನೆ. ಅಂದು ಹೋರಾಟದಲ್ಲಿ ಶೇ. 80ರಷ್ಟಿದ್ದ ಹಿಂದೂ ಸೈನಿಕರು ತಮ್ಮನ್ನು ಧರ್ಮದ ನೆಲೆಯಲ್ಲಿ ಗುರುತಿಸಿಕೊಂಡಿದ್ದರೆ, ಆ ಸಂದರ್ಭದಲ್ಲೇ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಬಹುದಿತ್ತು ಅಥವಾ ಹಿಂದೂ ರಾಜನ ನೇತೃತ್ವ ಬಯಸಬಹುದಿತ್ತು. ಲಕ್ಷ್ಮೀ ಬಾಯಿ, ತಾಂತ್ಯಾ ಟೋಪೆ, ನಾನಾ ಸಾಹೇಬ ಮೊದಲಾದ ರಾಜರಿದ್ದರು. ಆದರೆ ಅವರು ಕೆಂಪು ಕೋಟೆಗೆ ಹೋಗಿ ಬಾಹದ್ದೂರ್ ಶಾನ ನಾಯಕತ್ವ ಬಯಸುತ್ತಾರೆ. ಆತ ಮಣಿದು ಒಪ್ಪಿಕೊಂಡರೂ ಆತನಿಗೆ ಸೋಲಾಗುತ್ತದೆ. ಕೊನೆಗೆ ಆತನನ್ನು ಬಂಧಿಸಿ ರಂಗೂನ್‌ನಲ್ಲಿ ಜೈಲಿನಲ್ಲಿಡಲಾಗುತ್ತದೆ. ಆತನ ಸಮಾಧಿ ಇಂದಿಗೂ ಬರ್ಮಾದಲ್ಲಿದೆ. ಇದು ನಮ್ಮ ದೇಶದ ಉನ್ನತ ಪರಂಪರೆ ಎಂದು ಅವರು ವಿವರಿಸಿದರು.

ದೇಶದಲ್ಲಿ ಹಿಂದೂ ಮುಸ್ಲಿಂ ಸಮಸ್ಯೆ ಬ್ರಿಟಿಷರ ಬಳುವಳಿ. ಸ್ವಾತಂತ್ರ ದೊರಕಿದ ಬಳಿಕ ದೇಶ ವಿಭಜನೆಗೊಂಡಾಗ ಇಲ್ಲಿಗೆ ಈ ಸಮಸ್ಯೆ ಮುಗಿಯಿತು ಎಂದು ನಂಬಲಾಯಿತು. ಆದರೆ ಅಂದು ದೇಶದ ವಿಭಜನೆಯನ್ನು ಬೆಂಬಲಿಸಿದವರ ಸಂತತಿಯವರು ಇಂದಿಗೂ ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ಮನುಸ್ಮತಿಯನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪ್ರಥಮ ಸ್ವಾತಂತ್ರ ಸಂಗ್ರಾಮದಲ್ಲಿ ನಮ್ಮ ಹುತಾತ್ಮರು ಮಾಡಿರುವ ತ್ಯಾಗ ಬಲಿದಾನವನ್ನು ನಾನು ಭಾರತೆಯ ಮಾತೆಯ ಪುತ್ರನಾಗಿ ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ರಾಣಿ ಲಕ್ಷ್ಮೀಬಾಯಿಯ ಸೇನೆಯ ಮುಖ್ಯಸ್ಥರಾಗಿದ್ದವರು ಗೌಸ್ ಮುಹಮ್ಮದ್ ಖಾನ್ ಮತ್ತು ಖುದಾ ಭಕ್ಷ್. ಟಿಪ್ಪುವಿನ ಉಂಗುರದಲ್ಲಿ ರಾಮ್ ಎಂಬ ಉಲ್ಲೇಖವಿತ್ತು. ಔರಂಗಜೇಬ್ ಇಸ್ಲಾಮಿಕ್ ಆಡಳಿತಕ್ಕಾಗಿ, ಶಿವಾಜಿ ಹಿಂದೂ ಆಡಳಿತಕ್ಕಾಗಿ ಹೋರಾಡಿದ್ದರು. ಆದರೆ ಔರಂಗಜೇಬ್ ಮತ್ತು ಶಿವಾಜಿ ಮುಖಾಮುಖಿಯಾಗಿ ಹೋರಾಟ ನಡೆಸಿಲ್ಲ. ಶಿವಾಜಿ ವಿರುದ್ಧ ಸೆಣಸಿದ್ದು ರಾಜಾ ಜಯಸಿಂಗ್. ರಾಣಾ ಪ್ರತಾಪ್ ಹಾಗೂ ಅಕ್ಬರ್ ಕೂಡಾ ಯಾವತ್ತೂ ಪರಸ್ಪರ ಮುಖಾಮುಖಿಯಾಗಿಲ್ಲ ಎಂದು ಡಾ. ಶಂಸುಲ್ ಇಸ್ಲಾಂ ಹೇಳಿದರು.

1872-73ರಲ್ಲಿ ಬ್ರಿಟಿಷರು ಪ್ರಥಮ ಧಾರ್ಮಿಕ ಜನಗಣತಿ ನಡೆಸಿದ್ದರು. ಮುಸ್ಲಿಮರು ಶೇ. 23.5., ಹಿಂದೂಗಳು ಶೇ. 73.5. ಉಳಿದಂತೆ ಜೈನ್, ಬುದ್ಧರು ಹಾಗೂ ಇತರರು ಆಗಿದ್ದವರು. ಈ ಮಾಹಿತಿ ಗೂಗಲ್‌ನಲ್ಲಿ ಲಭ್ಯವಿದೆ. ಸುಮಾರು 700 ವರ್ಷಗಳಿಗೂ ಅಧಿಕ ಕಾಲ ಮುಸ್ಲಿಂ ಅರಸರ ಆಳ್ವಿಕೆ ದೇಶದಲ್ಲಿ ಇದ್ದರೂ ದೇಶದ ಜನರನ್ನು ಮತಾಂತರ ಮಾಡಲು ಸಾಧ್ಯವಾಗಿಲ್ಲ ಎಂದ ಮೇಲೆ ಧರ್ಮದ ಹೆಸರಿನಲ್ಲಿ ಪ್ರಸ್ತುತ ನಡೆಯುತ್ತಿರುವ ಅನಾಚಾರಗಳೆಲ್ಲವೂ ರಾಜಕೀಯವಲ್ಲದೆ ಬೇರೇನು ಎಂದವರು ಪ್ರಶ್ನಿಸಿದರು.

ಇವೆಲ್ಲಾ ಇತಿಹಾಸದ ಸತ್ಯಗಳು. ಇಂತಹ ಸತ್ಯಗಳನ್ನು ಜನತೆಯ ಮುಂದಿಟ್ಟರೆ ನಾವು ಪಾಕಿಸ್ತಾನಕ್ಕೆ ಹೋಗಬೇಕೆನ್ನುತ್ತಾರೆ. ಪಾಕಿಸ್ತಾನ ನಾಗರಿಕ ಸಮಾಜವಾಗಿ ತನ್ನ ಅಂತ್ಯವನ್ನು ಕಂಡಿದೆಎಂದು ಅವರು ಹೇಳಿದರು.

ಹಿಂದೂಗಳು, ಮುಸ್ಲಿಮರು, ಸಿಖ್, ಬೌದ್ಧರು ಯಾರ್ಯಾರು ಈ ದೇಶದಲ್ಲಿ ಹುಟ್ಟಿದವರು, ಇಲ್ಲಿ ಬಂದವರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಇವರೆಲ್ಲರ ಸಮಾನ ಶತ್ರು ಬ್ರಿಟಿಷರಾಗಿದ್ದರು. ಬ್ರಿಟಿಷರು ಐಕ್ಯತ್ಯೆಯನನು ಒಡೆಯಲು ಒಡೆದು ದೇಶವನ್ನು ವಿಭಜನೆ ಮಾಡಲು ಕಾರಣರಾದವರು ಬೆಳೆಸಿದವರು ಬ್ರಿಟಿಷರು. ಇದನ್ನು ಮುಂದುವರಿಸುವರಿದ್ದಾರೆ ಎಂದು ಅವರು ಹೇಳಿದರು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಯರಾಜ್ ಅಮೀನ್, ಡಾ. ಸಿದ್ಧನಗೌಡ ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಬಿ. ವಿ. ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗೇಶ್ ಕಲ್ಲೂರಾಯ ವಂದಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News