ಜಮ್ಮುವಿನ ರಜೌರಿಯಲ್ಲಿ ಉಗ್ರರ ಜತೆಗಿನ ಗುಂಡಿನ ಚಕಮಕಿ; ಬೆಂಗಳೂರಿನ ಕ್ಯಾ.ಪ್ರಾಂಜಲ್ ಸಹಿತ ನಾಲ್ವರು ಯೋಧರು ಹುತಾತ್ಮ

Update: 2023-11-23 14:55 GMT

ಕ್ಯಾಪ್ಟನ್ ಎಂವಿ ಪ್ರಾಂಜಲ್

ಮಂಗಳೂರು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಇಬ್ಬರು ಕ್ಯಾಪ್ಟನ್‌ಗಳಲ್ಲಿ ಬೆಂಗಳೂರಿನ ಎಂವಿ ಪ್ರಾಂಜಲ್ ಓರ್ವರಾಗಿದ್ದು, ಹುತಾತ್ಮ ಪ್ರಾಂಜಲ್ ಅವರು ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೆಶಕ ಎಂ. ವೆಂಕಟೇಶ್ ಅವರ ಏಕೈಕ ಪುತ್ರ ಎಂದು ತಿಳಿದು ಬಂದಿದೆ.

ಉಗ್ರರೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಕ್ಯಾಪ್ಟನ್‌ಗಳು ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದರು.

ಕ್ಯಾಪ್ಟನ್ ಎಂವಿ ಪ್ರಾಂಜಲ್ (29), ಪಿಎಆರ್‌ಎ ಕ್ಯಾಪ್ಟನ್ ಶುಭಂ ಮತ್ತು ಹವಾಲ್ದಾರ್ ಮಜೀದ್ ಮೃತರು ಎಂದು ಗುರುತಿಸಲಾಗಿದೆ. ನಾಲ್ಕನೇ ಯೋಧನ ಗುರುತು ಇನ್ನೂ ಪತ್ತೆಯಾಗಿಲ್ಲ.

ಹುತಾತ್ಮ ಪ್ರಾಂಜಲ್ ಅವರು ಪ್ರೌಢಶಾಲಾ ಹಂತದ ಶಿಕ್ಷಣವನ್ನು ಎಂಆರ್‌ಪಿಎಲ್‌ ಸಮೀಪವೇ ಇರುವ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಮಾಡಿದ್ದರು. ಬಳಿಕ ಡಿಫೆನ್ಸ್ ಅಕಾಡೆಮಿ ಸೇರಿದ್ದರು. ಅವರು ಇಂಜಿನಿಯರಿಂಗ್ ಶಿಕ್ಷಣ ಉನ್ನತ ಶ್ರೇಣಿಯಲ್ಲಿ ಪೂರೈಸಿದ್ದರು. ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ಹುದ್ದೆಗೆ ಪದೋನ್ನತಿಗೆ ಕಾಯುತ್ತಿರುವಾಗಲೇ ಅವರು ಉಗ್ರರೊಂದಿಗೆ ಸಂಭವಿಸಿದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ.

ಹುತಾತ್ಮ ಪ್ರಾಂಜಲ್ ಅವರ ತಂದೆ ವೆಂಕಟೇಶ್ ನಿವೃತ್ತರಾದ ಬಳಿಕ ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿತ್ತು. ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ವಿವಾಹವಾಗಿದ್ದು, ಪತ್ನಿ ಅದಿತಿ ಬೆಂಗಳೂರಿನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ.

ತಮ್ಮ ಏಕೈಕ ಮಗನನ್ನು ವೆಂಕಟೇಶ್ ಅವರು ಸೇನೆಗೆ ಸೇರಿಸಿದ್ದರು.

ಯೋಧರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿಯಲ್ಲಿ ಪ್ರಾಂಜಲ್ ಗಂಭೀರ ಗಾಯಗೊಂಡು ಹುತಾತ್ಮರಾದರು. ಉಗ್ರರು ಐದು ಅಥವಾ ಆರು ಸಂಖ್ಯೆಯಲ್ಲಿರಬಹುದು ಎಂದು ಮೂಲಗಳು ತಿಳಿಸಿವೆ. ಎನ್‌ಕೌಂಟರ್‌ನಲ್ಲಿ ಒಬ್ಬ ಉಗ್ರ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

"ಅವನ ಬಗ್ಗೆ ಏನು ಮಾತನಾಡುವುದೆಂದು ಗೊತ್ತಾಗುತ್ತಿಲ್ಲ. ವಿದ್ಯಾರ್ಥಿಗಳು, ಯುವಜನರು ಹೇಗೆ ಇರಬೇಕು ಎನ್ನುವುದಕ್ಕೆ ಅವನು ರೋಲ್ ಮೋಡೆಲ್ ಆಗಿದ್ದ. ಮಗುವಿನಂತಹ ಮನಸ್ಸು. ಸದಾ ಹರ್ಷಚಿತ್ತದಿಂದ ಹಾಗೂ ಇತರರಿಗೆ ಸ್ಫೂರ್ತಿ ದಾಯಕವಾಗಿರುತ್ತಿದ್ದ" ಎಂದು ಪಣಂಬೂರು ಎಂಆರ್‌ಪಿಎಲ್‌ನಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ವೈಸ್ ಪ್ರಾಂಶುಪಾಲೆ ಕೃಪಾ ಅಭಿಪ್ರಾಯಪಟ್ಟಿದ್ದಾರೆ.

ಅವನು ಸ್ಕೌಟ್ಸ್‌ನಲ್ಲಿ ರಾಷ್ಟ್ರಪತಿಯಿಂದ ಗೌರವ ಸ್ವೀಕರಿಸಿದ್ದ, ವಿಜ್ಞಾನ ವಸ್ತುಪ್ರದರ್ಶನದಲ್ಲಿ ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಟ್ಟದ ಪ್ರದರ್ಶನಕ್ಕೆ ಅರ್ಹತೆ ಪಡೆದಿದ್ದ. ಅವನು ಭೌತಿಕವಾಗಿ ನಮ್ಮ ಜೊತೆ ಈಗ ಇಲ್ಲ ಎಂದರೆ ನಂಬುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ಶಾಲೆಗೆ ರಜೆ

ಪ್ರಾಂಜಲ್‌ರ ಅಗಲುವಿಕೆಯ ಗೌರವಾರ್ಥ ಎಂಆರ್‌ಪಿಎಲ್ ಡೆಲ್ಲಿ ಪಬ್ಲಿಕ್ ಸ್ಕೂಲ್‌ಗೆ ಗುರುವಾರ ರಜೆ ಸಾರಲಾಗಿದೆ. ಶಾಲೆಯಲ್ಲಿ ಇಂದು ನಡೆಯಬೇಕಾಗಿದ್ದ ಕ್ರೀಡಾ ದಿನಾಚರಣೆಯನ್ನು ಮುಂದೂಡಲಾಗಿದೆ ಎಂದು ಪ್ರಾಂಶುಪಾಲೆ ಶೀಲಾ ತಿಳಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News