ಬಜಾಲ್ ನಂತೂರು ನವೀಕೃತ ಮಸೀದಿ ಉದ್ಘಾಟನೆ

Update: 2024-09-13 16:58 GMT

ಮಂಗಳೂರು, ಸೆ.13: ಮಸೀದಿಗಳು ಅಲ್ಲಾಹನ ಭವನಗಳಾಗಿವೆ. ಅಲ್ಲಾಹು ನೀಡಿದ ಸಂಪತ್ತಿನ ಸಮೃದ್ಧಿಯಿಂದ ಸುಂದರ ಮಸೀದಿಗಳು ನಿರ್ಮಾಣವಾಗುತ್ತಿದೆ. ಅದನ್ನು ಖಾಲಿ ಬಿಡದೆ ಎಲ್ಲ ಹೊತ್ತೂ ಸಾಮೂಹಿಕ ನಮಾಝ್ ಮಾಡುವ ಮೂಲಕ ಸಮೃದ್ಧವಾಗಿಡಬೇಕು ಎಂದು ಹಿರಿಯ ಧಾರ್ಮಿಕ ವಿದ್ವಾಂಸ ಕುಂಬೋಳ್ ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಳ್ ಹೇಳಿದರು.

ನಗರ ಹೊರವಲಯದ ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ನವೀಕೃತ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಮಸೀದಿಗಳಿಗೆ ತನ್ನದೇ ಆದ ಶಿಸ್ತು, ಗೌರವ ಇದೆ. ಅದನ್ನು ಚಾಚೂತಪ್ಪದೆ ಪಾಲಿಸಬೇಕು. ನಮಾಝ್, ಕುರ್‌ಆನ್ ಪಠಣ, ತಸ್ಬೀಹ್ ಹೊರತುಪಡಿಸಿ ಇತರ ಅನಗತ್ಯ ವಿಷಯಗಳ ಚರ್ಚೆಗೆ ಮಸೀದಿಯು ವೇದಿಕೆಯಾಗಬಾರದು. ಜಮಾತಿನವರ ಸಮಸ್ಯೆಗೆ ಆಡಳಿತ ಸಮಿತಿಯು ಕಿವಿಯಾಗಬೇಕು. ನೊಂದವರ ಸಮಸ್ಯೆಗಳಿಗೆ ಮಸೀದಿಗಳು ಸಾಂತ್ವನ ತಾಣವಾಗಿ ಪರಿಹಾರ ಒದಗಿಸಬೇಕು ಎಂದು ತಂಳ್ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಕ್ಷೇತ್ರ ವಿಂಗಡಣೆಗೆ ಮೊದಲು ನನ್ನ ತಂದೆ ಮತ್ತು ನಾನು ಪ್ರತಿನಿಧಿಸುತ್ತಿದ್ದ ಪ್ರದೇಶ ಇದಾಗಿತ್ತು. ಹಾಗಾಗಿ ಬಜಾಲನ್ನು ಮರೆಯಲು ಸಾಧ್ಯವಿಲ್ಲ. ಇದು ಜನರ ಮಧ್ಯೆ, ಪ್ರೀತಿ, ವಿಶ್ವಾಸ, ಕ್ಷಮೆಯ ಊರಾಗಬೇಕು. ಯಾರಿಗೂ ಪ್ರತೀಕಾರ ಮನೋಭಾವ ಬೇಡ ಎಂದರು.

ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ ಮಾತನಾಡಿದರು. ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಗೂ ಕಾರ್ಪೊರೇಟರ್ ಅಬ್ದುಲ್ ರವೂಫ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಶುಭ ಹಾರೈಸಿದರು.

ಮಸೀದಿಯ ಖತೀಬ್ ಪಿ.ಎ. ಅಬ್ದುಲ್ ನಾಸಿರ್ ಸಅದಿ ಕುತುಬಾ ಪಾರಾಯಣ ಮಾಡಿ ನಮಾಝ ನಿರ್ವಹಿಸಿದರು. ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಗೌಸಿಯ ಜುಮಾ ಮಸೀದಿಯ ಮುದರ್ರಿಸ್ ಝುಬೈರ್ ದಾರಿಮಿ, ಕಾರ್ಪೊರೇಟರ್‌ಗಳಾದ ಅಶ್ರಫ್ ಬಜಾಲ್, ಲತೀಫ್ ಕಂದಕ್, ಪ್ರಮುಖರಾದ ಎಚ್‌ಎಚ್ ಅಮೀನ್, ರವೂಫ್ ಸುಲ್ತಾನ್, ಫರ್ಹಾದ್ ಪಳ್ನೀರ್, ಅಹ್ಮದ್ ಬಾವಾ ಪಡೀಲ್, ಬಿಎನ್ ಅಬ್ಬಾಸ್, ಬಿ. ಫಕ್ರುದ್ದೀನ್, ಎಚ್.ಎಸ್. ಹನೀಫ್, ಎಂ.ಎಚ್. ಮುಹಮ್ಮದ್, ಬಿಜೆಎಂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಗೌಸಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಅಹ್ಮದ್ ಬಾವಾ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು. ಸದರ್ ಮುಅಲ್ಲಿಮ್ ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News