ಸುಬ್ರಹ್ಮಣ್ಯ ಸುತ್ತಮುತ್ತ ಮಿಂಚು ಪ್ರತಿಬಂಧಕ ಅಳವಡಿಕೆ: ದಿನೇಶ್ ಗುಂಡೂರಾವ್

Update: 2024-06-10 10:35 GMT

ಮಂಗಳೂರು, ಜೂ.10: ದ.ಕ. ಜಿಲ್ಲೆಯಲ್ಲಿ ಸಿಡಿಲು-ಗುಡುಗಿನಿಂದ ಸಾವು ಪ್ರಕರಣ ಹೆಚ್ಚಾಗಿ ಸಂಭವಿಸುವ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಂಚು ಪ್ರತಿಬಂಧಕ ವ್ಯವಸ್ಥೆಯನ್ನು ಅಳವಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆಗಾಲದ ಸಂದರ್ಭ ಸಂಭವನೀಯ ಪ್ರಾಕೃತಿಕ ವಿಕೋಪದ ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಸಚಿವರು ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಆರಂಭಿಕ ಹಂತದಲ್ಲಿ ಸುಳ್ಯ, ಬೆಳ್ತಂಗಡಿ, ಸುಬ್ರಹ್ಮಣ್ಯದ ಕೆಲವೆಡೆ ನಾಲ್ಕೈದು ಕಡೆಗಳಲ್ಲಿ ಈ ಪ್ರತಿಬಂಧಕಗಳನ್ನು ಪ್ರಾಯೋಗಿಕವಾಗಿ ಜಿಲ್ಲಾಡಳಿತದ ವತಿಯಿಂದ ಅಳವಡಿಸಲು ಕ್ರಮ ವಹಿಸಲಾಗುತ್ತಿದೆ. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗಾಗಲೇ ದೇವಸ್ಥಾನದ ವತಿಯಿಂದ ಮಿಂಚು ಪ್ರತಿಬಂಧಕ ವ್ಯವಸ್ಥೆ ಅಳವಡಿಸಲಾಗಿದೆ. ಇದು 500 ಮೀಟರ್ನಿಂದ 1.5 ಕಿ.ಮೀ. ವ್ಯಾಪ್ತಿವರೆಗಿನ ಪ್ರದೇಶದಲ್ಲಿ ಮಿಂಚಿನಿಂದಾಗುವ ಅಪಾಯಗಳಿಂದ ರಕ್ಷಣೆ ನೀಡಲಿದೆ ಎಂದರು.

ಕಳೆದ ಸುಮಾರು 10 ವರ್ಷಗಳಲ್ಲಿ ಈ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಿಂಚಿನಿಂದ ಸಾವು ಹಾಗೂ ಆಸ್ತಿಪಾಸ್ತಿ ನಷ್ಟವಾಗಿರುವ ಪ್ರಕರಣಗಳು ನಡೆಯುತ್ತಿದೆ. ಎತ್ತರದ ಪ್ರದೇಶವಾಗಿರುವ ಕಾರಣ ಮಿಂಚಿನಿಂದ ಹೆಚ್ಚಿನ ಅಪಾಯ ಈ ಭಾಗದಲ್ಲಿ ಸಂಭವಿಸುತ್ತಿರುವುದಾಗಿ ಅಂದಾಜಿಸಲಾಗಿದ್ದು, ಹಾಗಾಗಿ ಪ್ರಾಯೋಗಿಕವಾಗಿ ಈ ಪ್ರದೇಶಗಳಲ್ಲಿ ಈ ಮಿಂಚು ಪ್ರತಿಬಂಧಕ ಅಳವಡಿಸಲು ಕ್ರಮ ವಹಿಸಿದೆ ಎಂದರು.

ವಿಪತ್ತು ನಿರ್ವಹಣೆಗೆ ಸನ್ನದ್ಧವಾಗಿರಲು ಸೂಚನೆ

ಮಳೆಗಾಲದ ಸಂಭವನೀಯ ವಿಪತ್ತುಗಳನ್ನು ಎದುರಿಸಲು ಜಿಲ್ಲೆಯ ಎಲ್ಲಾ ಇಲಾಖೆಗಳು ಸನ್ನದ್ಧರಾಗಿರುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭ ಉಪಯೋಗಿಸುವ ಯಂತ್ರೋಪಕರಣಗಳ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಲು ಸಿದ್ಧತೆಯ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಲೂ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು.

ದ.ಕ. ಜಿಲ್ಲೆಯ ಕೆಲವು ಭಾಗಗಳಲ್ಲಿ ಕೆಂಪು ಮಣ್ಣಿನ ಕಾನೂನುಬಾಹಿರ ಗಣಿಗಾರಿಕೆ ಹಾಗೂ ಸಾಗಾಟದ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಅದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಪೊಲೀಸರ ಜತೆ ಕೈಜೋಡಿಸಿಕೊಂಡು ನಿರ್ದೇಶನ ನೀಡಲಾಗಿದೆ. ಕಾನೂನುಬಾಹಿರ ಈ ಕೃತ್ಯದಲ್ಲಿ ಯಾರದ್ದೇ ಹಸ್ತಕ್ಷೇಪ, ಮಧ್ಯ ಪ್ರವೇಶ ಇಲ್ಲದೆ ನಿಷ್ಪಕ್ಷವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಲೋಪ ಆದಲ್ಲಿ ಅಧಿಕಾರಿಗಳೇ ಹೊಣೆ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಕಾನೂನು ವಿರುದ್ಧ ಯಾರೇ ನಡೆದುಕೊಂಡರೂ ಸೂಕ್ತ ಕ್ರಮ

ಬೋಳಿಯಾರುವಿನಲ್ಲಿ ನಡೆದ ಘಟನೆಗೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಈಗಾಗಲೇ ಬಂಧಿಸಲಾಗಿದೆ. ಯಾರೇ ಕಾನೂನಿಗೆ ವಿರುದ್ಧ ಹೋದರೆ ಕಠಿಣ ಕ್ರಮ ವಹಿಸಲಾಗುತ್ತದೆ. ಅದರ ಬಗ್ಗೆ ಬಿಜೆಪಿಯವರು ಹೇಳುವ ಅಗತ್ಯವಿಲ್ಲ. ಯಾವುದೇ ಧರ್ಮ, ಜಾತಿ ಭೇದವಿಲ್ಲದೆ ಇಂತಹ ಘಟನೆಗಳ ಬಗ್ಗೆ ಕ್ರಮ ವಹಿಸುವಂತೆ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಹರೀಶ್ ಕುಮಾರ್, ಅಶೋಕ್ ಕುಮಾರ್ ರೈ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಉಪಸ್ಥಿತರಿದ್ದರು.

ಕೆಂಪುಕಲ್ಲಿನ ಗಣಿಗಾರಿಕೆ: ಲೋಪ ಆದಲ್ಲಿ ಅಧಿಕಾರಿಗಳೇ ಹೊಣೆ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News