ಮಡಪ್ಪಾಡಿ-ನಡುಬೆಟ್ಟು ಹದಗೆಟ್ಟ ರಸ್ತೆ| ಅನಾರೋಗ್ಯದ ವ್ಯಕ್ತಿಯನ್ನು ಆಸ್ಪತ್ರೆಗೆ ಹೊತ್ತುಕೊಂಡು ಹೋದ ಗ್ರಾಮಸ್ಥರು!

Update: 2024-10-16 15:57 GMT

ಸುಳ್ಯ: ರಸ್ತೆ ಸಂಪರ್ಕ ಸರಿ ಇಲ್ಲದ ಕಾರಣ ಅನಾರೋಗ್ಯ ಬಾಧಿಸಿದ್ದ ವೃದ್ಧರೊಬ್ಬರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಗ್ರಾಮಸ್ಥರು ಹೊತ್ತುಕೊಂಡು ಹೋದ ಘಟನೆ ಮಡಪ್ಪಾಡಿ ಗ್ರಾಮದ ನಡುಬೆಟ್ಟು ಎಂಬಲ್ಲಿ ನಡೆದಿದೆ.

ಮಡಪ್ಪಾಡಿ ಗ್ರಾಮದ ನಡುಬೆಟ್ಟು ಭಾಗದಲ್ಲಿ ಸುಮಾರು ಹದಿನಾಲ್ಕು ಮನೆಗಳಿವೆ. ಆದರೆ ಆ ಭಾಗವನ್ನು ಸಂಪರ್ಕಿಸಲು ಕಚ್ಚಾ ರಸ್ತೆ ಇದ್ದು, ಅದು ಸಂಪೂರ್ಣ ಹದಗೆಟ್ಟಿದೆ. ಪರಿಣಾಮ ವಾಹನ ಸಂಚರಿಸಲು ಅಸಾಧ್ಯವಾಗಿದೆ. ಹೀಗಾಗಿ ವಾಹನ ದವರು ಬರಲು ಒಪ್ಪದ ಕಾರಣ ಅನಾರೋಗ್ಯ ಬಾಧಿತ ವೃದ್ಧರೊಬ್ಬರನ್ನು ಹೊತ್ತುಕೊಂಡು ಆಸ್ಪತ್ರೆಗೆ ದಾಖಲಿಸಿದ ಪರಿಸ್ಥಿತಿ ನಡೆಯಿತು.

ಮಡಪ್ಪಾಡಿ ಗ್ರಾಮದ ನಡುಬೆಟ್ಟು ಪ್ರದೇಶಕ್ಕೆ ಮೂಲಭೂತ ಸೌಕರ್ಯಗಳಿಲ್ಲ. ಹೆಸರಿಗಷ್ಟೇ ಒಂದು ರಸ್ತೆ ಇದೆ. ಈ ರಸ್ತೆ ಕಡಿದಾದ ಜಾಗದಲ್ಲಿದ್ದು ರಸ್ತೆಯ ಉದ್ದಕ್ಕೂ ಹೊಂಡ ಗುಂಡಿಗಳೇ ಇರುವುದರಿಂದ ಮಳೆಗಾಲದಲ್ಲಿ ಸಂಚಾರ ದುಸ್ತರ. ಬೇಸಿಗೆ ಕಾಲದಲ್ಲಿ ಮಾತ್ರ ಜೀಪು ಪಿಕಪ್‍ಗಳು ಮಾತ್ರ ಈ ರಸ್ತೆಯಲ್ಲಿ ಸಂಚರಿಸುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಯಾವ ವಾಹನಗಳು ಕೂಡಾ ಸಂಚರಿದ ಪರಿಸ್ಥಿತಿ ಇದೆ. ಹೀಗಾಗಿ ಇಲ್ಲಿನ ಗ್ರಾಮಸ್ಥರು ಕೃಷಿ ಉತ್ಪನ್ನ ಸಾಗಿಸಲು, ಮನೆ ಸಾಮಗ್ರಿ, ಪಡಿತರ ವಸ್ತುಗಳನ್ನು ಹೊತ್ತುಕೊಂಡು ಸಾಗಿಸಬೇಕಾಗಿದೆ. ದ್ವಿಚಕ್ರ ವಾಹನಗಳನ್ನು ಸುಮಾರು 2 ಕಿ.ಮೀ. ದೂರದ ಬೇರೆಯವರ ಮನೆಯ ಪಕ್ಕ ರಸ್ತೆಯಲ್ಲಿ ನಿಲ್ಲಿಸಿ ನಡೆದು ಕೊಂಡು ಹೋಗುವುದೇ ಅವರ ದಿನಚರಿ ಆಗಿದೆ. ಇದಕ್ಕೆ ಸಂಬಂಧ ಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಸ್ಪಂಧಿಸಿ ಸುಸಜ್ಜಿತ ರಸ್ತೆ ನಿರ್ಮಿಸಿಕೊಡಬೇಕೆಂದು ಈ ಭಾಗದವರ ಬೇಡಿಕೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News