ಮಂಗಳೂರು: ಫೆ 10-11ರಂದು ತಣ್ಣೀರು ಬಾವಿ ಕಡಲ ತೀರದಲ್ಲಿ ಗಾಳಿಪಟ ಉತ್ಸವ

Update: 2024-02-09 14:08 GMT

 ಮಂಗಳೂರು, ಫೆ. 9: ಟೀಮ್ ಮಂಗಳೂರು ತಂಡದ ಆಶ್ರಯದಲ್ಲಿ ಮಂಗಳೂರಿನ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಫೆ. 10 ಮತ್ತು 11ರಂದು ನಡೆಯಲಿರುವ ಗಾಳಿಪಟ ಉತ್ಸವಕ್ಕೆ ಈಗಾಗಲೇ ಹೊರ ರಾಷ್ಟ್ರಗಳು ಸೇರಿದಂತೆ ಗಾಳಿಪಟ ಹಾರಾಟಗಾರರು ಆಗಮಿಸಿದ್ದಾರೆ.

ಎರಡು ದಿನಗಳ ಕಾಲ ಮಧ್ಯಾಹ್ನ 3ರಿಂದ ರಾತ್ರಿ 7 ಗಂಟೆಯವರೆಗೆ ಗಾಳಿಪಟ ಹಾರಾಟ ಮತ್ತು ಪ್ರದರ್ಶನವಿರಲಿದ್ದು, ಬಳಿಕ ವಿದ್ಯುತ್ ದೀಪಗಳ ಬಣ್ಣಗಳ ಬೆಳಕಿನಲ್ಲಿಯೂ ಗಾಳಿಪಟ ಹಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಟೀಮ್ ಮಂಗಳೂರು ತಂಡದ ಸ್ಥಾಪಕ ಬಿ. ಸರ್ವೇಶ್ ರಾವ್ ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.

‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಸಾಮರಸ್ಯ, ಐಕ್ಯತಾ ಭಾವಗಳಿಂದ ಗಾಳಿಪಟ ಹಾರಾಟ ನಡೆಯಲಿದ್ದು, ಈಗಾಗಲೇ ಇಂಡನೋಷ್ಯಾ, ಯುಕ್ರೇನ್, ಥಾಯ್ಲೆಂಡ್ ಸೇರಿದಂತೆ ವಿದೇಶಿ ಗಾಳಿಪಟ ಹಾರಾಟಗಾರರು ಮಂಗಳೂರಿಗೆ ಆಗಮಿಸಲಾರಂಭಿಸಿದ್ದಾರೆ. ಸುಮಾರು 1000ಕ್ಕೂ ಅಧಿಕ ವಿವಿಧ ವಿನ್ಯಾಸ, ಗಾತ್ರಗಳಿಂದ ಕೂಡಿದ ಗಾಳಿಪಟಗಳು ತಣ್ಣೀರುಬಾವಿ ಕಡಲ ಕಿನಾರೆಯ ಬಾಳಂಗಳದಲ್ಲಿ ಹಾರಾಡಲಿವೆ. ಭಾರತದ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಕೇರಳ ಮೊದಲಾದ ರಾಜ್ಯಗಳ ಗಾಳಿಪಟ ತಂಡಗಳೂ ಈ ಉತ್ಸವದಲ್ಲಿ ಪಾಲ್ಗೊಳ್ಳಲಿವೆ. ಎಂಆರ್‌ಪಿಎಲ್- ಒಎನ್‌ಜಿಸಿ ಸಂಸ್ಥೆಯ ಪ್ರಾಯೋಜಕತ್ವ ಹಾಗೂ ದ.ಕ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಈ ಉತ್ಸವ ಈ ಬಾರಿ ನಡೆಯುತ್ತಿದೆ ಎಂದು ಅವರು ವಿವರಿಸಿದರು.

ಸಾಂಪ್ರದಾಯಿಕ, ಅರೋಫಾಯಿಲ್ ಗಾಳಿಪಟಗಳು

ಗಾಳಿಪಟ ಉತ್ಸವದಲ್ಲಿ ಟೀಮ್ ಮಂಗಳೂರು ತಂಡದ ಸಾಂಪ್ರದಾಯಿಕ ಗಾಳಿಪಟಗಳ ಜತೆಗೆ ದೇಶ ವಿದೇಶಗಳ ಅಧುನಿಕ ಶೈಲಿ ಹಾಗೂ ವಿನ್ಯಾಸದಿಂದ ಕೂಡಿದ ಎರೋಫಾಯಿಲ್ ಗಾಳಿಪಟಗಳು ಕೂಡಾ ಹಾರಾಡಲಿವೆ.

ಫೆ. 10ರಂದು ಸಂಜೆ 5 ಗಂಟೆಗೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉದ್ಘಾಟನೆ ನೆರವೇರಿಸಲಿದ್ದು, ಎನ್‌ಎಂಪಿಎ ಅಧ್ಯಕ್ಷ ವೆಂಕಟ್ರಮಣ ಅಕ್ಕರಾಜು, ಮೆಡೆಕ್ ಮೆಡಿಕೇರ್‌ನ ದೀಪಕ್ ಶೆಣೈ ಭಾಗವಹಿಸಲಿದ್ದಾರೆ. ಅಗತ್ಯ ಭದ್ರತಾ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯದ ಜತೆಗೆ ಕೆಐಎಸಿಎಲ್ ಬಳಿಯಿಂದ ತಣ್ಣೀರುಬಾವಿ ಬೀಚ್‌ವರೆಗೆ ಆರು ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸುಲ್ತಾನ್ ಬತ್ತೇರಿಯಿಂದ ದೋಣಿಯಲ್ಲಿ ಬರುವವರಿಗೂ ರಾತ್ರಿ 10 ಗಂಟೆಯವರೆಗೆ ದೋಣಿ ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂಪರ್ಕ ಕೌಂಟರ್, ಆ್ಯಂಬುಲೆನ್ಸ್, ಅಗ್ನಿಶಾಮಕ ಕೌಂಟರ್, ಆಹಾರ ಮಳಿಗೆ, ಗಾಳಿಪಟ ಖರೀದಿಸುವರಿಗೆ ಕೈಟ್ ಸ್ಟಾಲ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಅವರು ಹೇಳಿದರು.

ಟೀಮ್ ಮಂಗಳೂರು ತಂಡ ಕಥಕ್ಕಳಿ ಗಾಳಿಪಟ ಭಾರತದಲ್ಲಿಯೇ ಅತೀ ದೊಡ್ಡ ಗಾಳಿಪಟವಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಪಡೆದಿದೆ. ಸುಮಾರು 15 ವರ್ಷಗಳಿಂದ ಹಾರಾಟ ನಡೆಸಿದ ಈ ಗಾಳಿಪಟವನ್ನು ಪುನರ್‌ರೂಪಿಸಲಾಗಿದೆ. ಇದಲ್ಲದೆ ಯಕ್ಷಗಾನ, ಭರತನಾಟ್ಯ, ಭೂತಾರಾಧನೆಯ ಗಾಳಿಪಟಗಳೂ ತಂಡದ ವಿಶೇಷವಾಗಿದ್ದು, ಮುಂದೆ ಕಂಬಳ ಮತ್ತು ಹಂಪಿ ರಥದ ಗಾಳಿಪಟ ತಯಾರಿಯ ಇರಾದೆಯೂ ಇದೆ ಎಂದು ಕಲಾವಿದ ದಿನೇಶ್ ಹೊಳ್ಳ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸುಭಾಷ್ ಪೈ, ಪ್ರಾಣ್ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು.

 

ಮಾಂಜಾ ಕೈಟ್ ಹಾರಾಟಕ್ಕೆ ಅವಕಾಶವಿಲ್ಲ

ಗಾಳಿಪಟ ಉತ್ಸವದಲ್ಲಿ ದೇಶ ವಿದೇಶಗಳ ಸಾಂಪ್ರದಾಯಿಕ, ಆಧುನಿಕ ಶೈಲಿಯ ಕಲಾತ್ಮಕ ಹಾಗೂ ವಿನ್ಯಾಸಮಯ ಗಾಳಿಪಟಗಳು ಭಾಗವಹಿಸುತ್ತಿದ್ದು, ಕಾಟನ್ ಮತ್ತು ನೈಲಾನ್ ದಾರದಿಂದ ಹಾರಾಡುವ ಗಾಳಿಪಟಗಳಾಗಿರುತ್ತವೆ. ಮಾಂಜಾ ಕೈಟ್‌ಗಳಿಗೆ ಯಾವುದೇ ರೀತಿಯಲ್ಲಿ ಅವಕಾಶ ಇರುವುದಿಲ್ಲ ಎಂದು ಟೀಮ್ ಮಂಗಳೂರು ತಂಡದ ಪ್ರಶಾಂತ್ ಉಪಾಧ್ಯಾಯ ಸ್ಪಷ್ಟಪಡಿಸಿದರು.

ಫೈಟರ್ ಕೈಟ್ ನಿಪುಣ ಅಬ್ದುಲ್ ರವೂಫ್: ಏಕದಾರದಲ್ಲಿ ಹಾರಲಿವೆ 101 ಬಟರ್ ಫ್ಲೈಗಳು!

ಮುಂಬೈನ ಗೋಲ್ಡನ್ ಕೈಟ್ ಕ್ಲಬ್‌ನ ಸದಸ್ಯ, ಅಂತಾರಾಷ್ಟ್ರೀಯವಾಗಿ ಗಾಳಿಪಟ ಹಾರಾಟಗಾರ ಮಾತ್ರವಲ್ಲದೆ ವಿಶೇಷವಾಗಿ ಫೈಟರ್ ಕೈಟ್ ನಿಪುಣ ಎಂದೇ ಖ್ಯಾತಿ ಪಡೆದಿರುವ ಅಬ್ದುಲ್ ರವೂಫ್ ಅವರು ಈ ಬಾರಿ ಮಂಗಳೂರಿನ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ.

74ರ ಹರೆಯದ ಅಬ್ದುಲ್ ರವೂಫ್ ಅವರು ಟ್ರೇನ್ ಕೈಟ್ (ಒಂದೇ ದಾರದಲ್ಲಿ ಪೋಣಿಸಲ್ಪಟ್ಟ ಹಲವು ಗಾಳಿಪಟಗಳು) ಹಾರಾಟದಲ್ಲಿ ಚಾಣಾಕ್ಷ. ರೈಲು ಬೋಗಿಯಂತೆ ಒಂದರ ಹಿಂದೆ ಒಂದು ಗಾಳಿಪಟಗಳು ಬಾನಂಗಳದಲ್ಲಿ ಹಾರಾಡುವ ಈ ಟ್ರೇನ್ ಕೈಟ್ ನೋಡುವುದಕ್ಕೆ ಅತ್ಯಾಕರ್ಷಕ. ಇಂತಹ ಟ್ರೇನ್ ಗಾಳಿಪಟಗಳ ತಯಾರಕರೂ ಆಗಿರುವ ಅಬ್ದುಲ್ ರವೂಫ್ ಕಳೆದ ಸುಮಾರು 28 ವರ್ಷಗಳಿಂದ ಯೂರೋಪ್‌ನಾದ್ಯಂತ ನಡೆಯುವ ಗಾಳಿಪಟ ಉತ್ಸವಗಳಲ್ಲಿ ಭಾಗಿಯಾಗುತ್ತಿದ್ದಾರೆ.

‘ಗಾಳಿಪಟ ತಯಾರಿ ಹಾಗೂ ಹಾರಾಟ ನನ್ನ ಹವ್ಯಾಸ. ದೇಶ ವಿದೇಶದಲ್ಲಿ ನಡೆಯುವ ಗಾಳಿಪಟ ಉತ್ಸವಗಳಲ್ಲಿ ನಿರಂತರ ವಾಗಿ ಭಾಗವಹಿಸುತ್ತಿದ್ದೇನೆ. ಮಂಗಳೂರಿಗೆ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದೇನೆ’ ಎಂದು ಅಬ್ದುಲ್ ರವೂಫ್ ಹೇಳಿದ್ದಾರೆ.

‘ಈ ಬಾರಿ ಮಂಗಳೂರು ಉತ್ಸವದಲ್ಲಿ ನನ್ನ 101 ಚಿಟ್ಟೆ (ಬಟರ್‌ಫ್ಲೈ)ಗಳನ್ನು ಒಳಗೊಂಡ ಟ್ರೇನ್ ಕೈಟ್‌ನ ಜತೆಗೆ, 70 ಬ್ಯಾಟ್‌ಮ್ಯಾನ್‌ಗಳು ಹಾಗೂ 35 ಸ್ಟಾರ್‌ಗಳಿಂದ ಕೂಡಿದ ಟ್ರೇನ್ ಕೈಟ್‌ಗಳು ಹಾರಾಡಿವೆ. ಈ ಟ್ರೇನ್ ಕೈಟ್ ತಯಾರಿಗೆ ಸುಮಾರು ಒಂದು ತಿಂಗಳು ಬೇಕಾಗುತ್ತದೆ. ಇದನ್ನು ಹಾರಾಟ ನಡೆಸುವುದು ಕೂಡಾ ಅತ್ಯಂತ ತ್ರಾಸದಾಯಕ. ಗಾಳಿ ಪಟದ ದಾರವನ್ನು ಸೊಂಟಕ್ಕೆ ಕಟ್ಟಿಕೊಂಡು ಇಬ್ಬರು ಈ ಟ್ರೇನ್ ಕೈಟ್‌ಗಳನ್ನು ನಿಯಂತ್ರಿಸಬೇಕಾಗುತ್ತದೆ. ಇದಕ್ಕೆ ಕೇವಲಾ ಎಂಬ ದಾರವನ್ನು ಉಪಯೋಗಿಸಲಾಗುತ್ತಿದ್ದು, ಕೇವಲ ಭಾರತೀಯ ಸಾಂಪ್ರದಾಯಿಕ ಶೈಲಿಯ ಗಾಳಿಪಟಗಳನ್ನು ಮಾತ್ರವೇ ನಾನು ತಯಾರಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಮಲೇಷ್ಯಾದ ಲಿಯನ್ನವತಿ ಲೆ

ಕಳೆದ 30 ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸುತ್ತಿರುವ ಮಲೇಷ್ಯಾದ ಲಿಯನ್ನವತಿ ಲೆ ಅವರು ಮಂಗಳೂರಿಗೆ ಎರಡನೆ ಬಾರಿಗೆ ಆಗಮಿಸಿದ್ದಾರೆ. ಈ ಹಿಂದೆ ಮಂಗಳೂರಿನಲ್ಲಿ ನಡೆದ ಗಾಳಿಪಟ ಉತ್ಸವದಲ್ಲಿ ತಾನು ಬೃಹತ್ ಹನುಮಂತ, ಮತ್ಸ್ಯ ಮೊದಲಾದ ಗಾಳಿಪಟಗಳನ್ನು ಹಾರಿಸಿದ್ದಾಗಿ ಹೇಳುವ ಅವರು, ಈ ಬಾರಿ ಫೆರ್ರಿ ಥಿಂಕರ್ ಬೆಲ್ ಗಾಳಿಪಟವನ್ನು ತಂದಿರುವುದಾಗಿ ತಿಳಿಸಿದರು.

ಸಿಂಗಾಪುರ, ಥಾಯ್ಲೆಂಟ್, ಮಲೇಶ್ಯ, ಕಾಂಬೋಡಿಯಾ ಮೊದಲಾದೆಡೆ ಉತ್ಸವಗಳಲ್ಲಿ ತನ್ನ ಬೃಹತ್ ಗಾಳಿಪಟಗಳನ್ನು ಪ್ರದರ್ಶಿಸಿರುವುದಾಗಿ ಹೇಳುವ 65ರ ಹರೆಯದ ಲಿಯನ್ನವತಿ, ಬೃಹತ್ ಗಾಳಿಪಟಗಳ ರಫ್ತುದಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉಕ್ರೇನ್‌ನ ಯುವಕ ಒಲೆಸ್ಕಿ ಶ್ರಮ್ಕೊ ಹಾಗೂ ಥಾಯ್ಲೆಂಡ್‌ನ ಯುವತಿ ನೀ ಎಂಬ ಜೋಡಿಯನ್ನು ನಾಲ್ಕು ವರ್ಷಗಳ ಹಿಂದೆ ನಡೆದ ಗಾಳಿಪಟ ಉತ್ಸವ ಜೋಡಿಯನ್ನಾಗಿಸಿದೆಯಂತೆ.

‘ನಾವಿಬ್ಬರೂ ಎಂಟು ವರ್ಷಗಳಿಂದ ಪರಿಚಯ ಹೊಂದಿದ್ದೆವು. ಆದರೆ ನಾಲ್ಕು ವರ್ಷಗಳ ಹಿಂದೆ ಥ್ಲಾಯ್ಲೆಂಡ್‌ನಲ್ಲಿ ನಡೆದ ಗಾಳಿಪಟ ಉತ್ಸವ ನಮ್ಮನ್ನು ಜೋಡಿಯನ್ನಾಗಿಸಿತು. ಇದೀಗ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳು ಎಲ್ಲೇ ನಡೆದರೂ ಅಲ್ಲಿ ನಮ್ಮ ಗಾಳಿಪಟದೊಂದಿಗೆ ಭಾಗವಹಿಸುತ್ತಿದ್ದೇವೆ. ಈ ಬಾರಿ ನಮ್ಮ ಗಾಳಿಪಟದ ಥೀಮ್ ಕ್ಯಾಟ್. ಮಕ್ಕಳಿಗೆ ಇಷ್ಟವಾಗುವ ಪ್ರಾಣಿಗಳ ಚಿತ್ರಗಳ ಗಾಳಿಪಟಗಳನ್ನು ನಾವು ತಯಾರಿಸುತ್ತೇವೆ’’ ಎನ್ನುತ್ತಾರೆ ನೀ.

‘ಫೆ. 22ರಂದು ಥಾಯ್ಲೆಂಡ್‌ನಲ್ಲಿ ಅತೀ ದೊಡ್ಡ ಗಾಳಿಪಟ ಉತ್ಸವ ನಡೆಯಲಿದೆ. ಅಲ್ಲಿಯೂ ಭಾಗವಹಿಸಲಿದ್ದು, ಕಳೆದ ಜನವರಿಯಲ್ಲಿ ಅಹ್ಮದಾಬಾದ್‌ನಲ್ಲಿ ನಡೆದ ಉತ್ಸವದಲ್ಲೂ ನಾವಿಬ್ಬರು ಪಾಲ್ಗೊಂಡಿದ್ದೆವು. ನಾನು ಮಂಗಳೂರಿಗೆ ಈ ಹಿಂದಿನ ಉತ್ಸವಕ್ಕೂ ಆಗಮಿಸಿದ್ದೆ. ನೀ ಇದೇ ಮೊದಲ ಬಾರಿಗೆ ಮಂಗಳೂರು ಆಗಮಿಸುತ್ತಿದ್ದಾರೆ’ ಎನ್ನುತ್ತಾರೆ ಒಲೆಸ್ಕಿ.

ಫೆ. 10 ಮತ್ತು 11ರಂದು ಮಂಗಳೂರಿನ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸುವ ಸಲುವಾಗಿ ಥೈಯ್ಲಾಂಡ್‌ನ ಪಲವಾನ್ ಸುಕನ್‌ಲಯ, ಗ್ರೀಸ್‌ನ ಕೊನ್‌ಸ್ಟಂಟಿನ್ ರಾಟ್‌ಸಸ್, ಎಸ್ಟೋನಿಯಾದ ಆ್ಯಂಡ್ರೀಸ್ ಸೊಕ್, ಲಿಯಾ ರಿಡಲಿ, ಸ್ವೀಡನ್‌ನ ಆ್ಯಂಡ್ರೆಸ್ ಅಗ್ರೆನ್, ಇಂಡೋನೇಷ್ಯಾದ ಸರಿ ಸಬ್ದಾ ಭಕ್ತಿ ಮದ್‌ಝಿದ್, ಟಿಂಟಾನ್ ಪ್ರಿಯಾಂಗೊರೊ, ವೆನಾಸ್ ಒಂಗೊವಿನೊಟೊ, ಮಲೇಶ್ಯಾದ ಮುಹಮ್ಮದ್ ಫದ್ಜಿಲ್ ಬಿನ್ ಅಲಿ, ವಾನ್ ಅಹ್ಮದ್ ಅಳ್ಳವಿ ಬಿನ್ ವನ್ ಹುಸೇನ್ ಅವರನ್ನೊಳಗೊಂಡ ತಂಡಗಳು ಈಗಾಗಲೇ ಮಂಗಳೂರಿಗೆ ಆಗಮಿಸಿವೆ. ಸಿಂಗಾಪುರ, ಶ್ರೀಲಂಕಾ ಸೇರಿದಂತೆ ಇನ್ನೂ ಹಲವು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News