ಮಂಗಳೂರು ವಿವಿಯಿಂದ ಹಾಸ್ಟೆಲ್ ನಿರ್ಮಾಣದ 7 ಕೋಟಿ ರೂ. ದುರ್ಬಳಕೆ : ಆರೋಪ

Update: 2025-04-15 15:37 IST
ಮಂಗಳೂರು ವಿವಿಯಿಂದ ಹಾಸ್ಟೆಲ್ ನಿರ್ಮಾಣದ 7 ಕೋಟಿ ರೂ. ದುರ್ಬಳಕೆ : ಆರೋಪ
  • whatsapp icon

ಮಂಗಳೂರು : ರಾಷ್ಟ್ರೀಯ ಉಚ್ಛತರ್ ಶಿಕ್ಷಾ ಅಭಿಯಾನ (RUSA-1) ಅಡಿಯಲ್ಲಿ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್‌ಗಳ ನಿರ್ಮಾಣಕ್ಕಾಗಿ ಪಡೆದ 7 ಕೋಟಿ ರೂ. ಗಳನ್ನು ಮಂಗಳೂರು ವಿಶ್ವವಿದ್ಯಾಲಯ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ.

ನಿಧಿ ಬಳಕೆಯ ಪರಿಶೀಲನೆಗಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯು ರಚಿಸಿದ ತಜ್ಞರ ಸಮಿತಿಯ ಭೇಟಿಯ ವೇಳೆ ಇದು ಬಹಿರಂಗವಾಗಿದ್ದು, ಹಣ ಬಳಕೆಯಲ್ಲಿ ಆದ ವ್ಯತ್ಯಾಸವನ್ನು ಗಮನಿಸಿ ಬೆಂಗಳೂರಿನಲ್ಲಿ ನಡೆದ ರಾಜ್ಯದ ಉನ್ನತ ಶಿಕ್ಷಣ ಯೋಜನಾ ನಿರ್ದೇಶಕರ ಸಭೆಯಲ್ಲಿ ಈ ವಿಷಯವನ್ನು ಸಮಿತಿ ಪ್ರಸ್ತಾಪಿಸಿದೆ.

ವಿಶ್ವವಿದ್ಯಾಲಯ ಆವರಣದಲ್ಲಿ ಯಾವುದೇ ಹಾಸ್ಟೆಲ್ ಕಟ್ಟಡಗಳು ಕಾಣಿಸದಿದ್ದರಿಂದ ಪರಿಶೀಲನೆಗಾಗಿ ತೆರಳಿದ್ದ ತಜ್ಞರ ಸಮಿತಿ ಅಧಿಕಾರಿಗಳನ್ನು ದಾಖಲೆಗಳನ್ನು ನೀಡುವಂತೆ ತಿಳಿಸಿದೆ. ಅಧಿಕಾರಿಗಳು “ಅಂತರರಾಷ್ಟ್ರೀಯ ಹಾಸ್ಟೆಲ್” ನಿರ್ಮಾಣಕ್ಕಾಗಿ ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಹೇಳುವ ಮೂಲಕ ಸಮಿತಿಯನ್ನು “ತಪ್ಪುದಾರಿಗೆಳೆಯಲು” ಪ್ರಯತ್ನಿಸಿದ್ದಾರೆ ಎಂದು ತಜ್ಞರ ಸಮಿತಿ ವರದಿಯಲ್ಲಿ ತಿಳಿಸಿದೆ ಎನ್ನಲಾಗಿದೆ.

ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ ಬಳಕೆಯ ಪ್ರಮಾಣಪತ್ರದಲ್ಲಿ, ವಿಶ್ವವಿದ್ಯಾಲಯವು ಎರಡು ಹಾಸ್ಟೆಲ್‌ಗಳನ್ನು ನಿರ್ಮಿಸಿದೆ ಎಂದು ಹೇಳಿಕೊಂಡಿದೆ ಎನ್ನಲಾಗಿದೆ.

ಯೋಜನಾ ನಿರ್ದೇಶಕರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡ ನಂತರ ವಿಶ್ವವಿದ್ಯಾಲಯ ಅಧಿಕಾರಿಗಳಿಗೆ ಶೋ-ಕಾಸ್ ನೋಟಿಸ್ ನೀಡಲಾಗಿದ್ದು, ಅದಕ್ಕೆ ಪ್ರತಿಯಾಗಿ ವಿವಿಯಿಂದ ನೀಡಲಾದ ವಿವರಣೆಯು ತೃಪ್ತಿಕರವಾಗಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

RUSA-1 ಅನ್ನು 2013 ಮತ್ತು 2017 ರ ನಡುವೆ ಜಾರಿಗೊಳಿಸಲಾಗಿದೆ. ಹಣವನ್ನು ಹಂಚಿಕೆ ಮಾಡಿದ ಯೋಜನೆಗಳು ಪೂರ್ಣಗೊಂಡ ನಂತರ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಬಳಕೆಯ ಪ್ರಮಾಣಪತ್ರವನ್ನು ಸಲ್ಲಿಸಲು ತಿಳಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾಲಯಕ್ಕೆ ಮಂಜೂರು ಮಾಡಲಾದ 7 ಕೋಟಿ ರೂ.ಗಳಲ್ಲಿ, 3.5 ಕೋಟಿ ರೂ. ಬಾಲಕರ ಹಾಸ್ಟೆಲ್ ನಿರ್ಮಾಣಕ್ಕಾಗಿ ಮತ್ತು 3.5 ಕೋಟಿ ರೂ. ಬಾಲಕಿಯರ ಹಾಸ್ಟೆಲ್‌ಗಾಗಿ ಖರ್ಚು ಮಾಡಬೇಕಿತ್ತು.

RUSA ಅಡಿಯಲ್ಲಿ ಬಿಡುಗಡೆಯಾದ ಹಣವನ್ನು ಅವುಗಳನ್ನು ಹಂಚಿಕೆ ಮಾಡಿದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. RUSA ನಿಧಿಯ ಶೇ.60 ರಷ್ಟು ಕೇಂದ್ರದಿಂದ ಬಂದಿದ್ದರೆ, ರಾಜ್ಯವು ಉಳಿದ ಶೇ.40 ರಷ್ಟು ಕೊಡುಗೆ ನೀಡುತ್ತದೆ.

ಈ ಮಧ್ಯೆ, ಹಿಂದಿನ ಆಡಳಿತ ಅವಧಿಯಲ್ಲಿನ ಅನುದಾನ ಬಳಕೆಯಲ್ಲಿನ ವ್ಯತ್ಯಾಸದ ಬಗ್ಗೆ ವರದಿ ಪಡೆಯುವ ನಿಟ್ಟಿನಲ್ಲಿ ಆಂತರಿಕ ತನಿಖೆ ನಡೆಸಲು ಮಂಗಳೂರು ವಿವಿ ನಿರ್ಧರಿಸಿದೆ. ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ತನಿಖೆ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರ ಸರಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ ಎಂದು ಮಂಗಳೂರು ವಿವಿ ಮೂಲಗಳು ತಿಳಿಸಿವೆ.

ವಿಶ್ವವಿದ್ಯಾನಿಲಯವು ದುರುಪಯೋಗಪಡಿಸಿಕೊಂಡ ಹಣವನ್ನು ವಸೂಲಿ ಮಾಡಲು ಮತ್ತು ದಂಡ ವಿಧಿಸಲು ಉನ್ನತ ಶಿಕ್ಷಣ ಸಮಿತಿ ಶಿಫಾರಸು ಮಾಡಿದ್ದು, ಅದರ ಆಧಾರದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಮಂಗಳೂರು ವಿವಿಗೆ ನೋಟೀಸು ಜಾರಿಗೊಂಡಿರುವು ದಾಗಿಯೂ ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News