ಮಂಗಳೂರು: ಮತಗಟ್ಟೆಯಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ; ಪೊಲೀಸ್ ಇನ್ಸ್ ಪೆಕ್ಟರ್, ಮಾಧ್ಯಮದ ಜೊತೆ ಅನುಚಿತ ವರ್ತನೆ

Update: 2024-04-26 09:09 GMT

ಮಂಗಳೂರು: ನಗರದ ಕಪಿತಾನಿಯೋ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿ ಜೊತೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತನೊಬ್ಬ ಪೊಲೀಸ್ ಹಾಗೂ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದವುಂಟಾದ ಘಟನೆ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್. ಆರ್ ಪೂಜಾರಿಯವರು ಮತದಾನ ಮಾಡಿ ಹೊರಬಂದಾಗ ಮಾಧ್ಯಮದವರು ಗೇಟಿನ ಹೊರಭಾಗದಲ್ಲಿ ಅವರ ಹೇಳಿಕೆ ತೆಗೆದುಕೊಳ್ಳುತ್ತಿದ್ದರು. ಆಗ "ಎಷ್ಟು ಹೊತ್ತು ಪ್ರತಿಕ್ರಿಯೆ ಪಡೆಯುವುದು''ಎಂದು ಸಂದೀಪ್ ಎಕ್ಕೂರು ಎಂಬಾತ ಕ್ಯಾತೆ ತೆಗೆದಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಸೇರಿದಂತೆ ಇತರ ಪೊಲೀಸರು ಆತನನ್ನು ತಳ್ಳಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ಈ ವೇಳೆ ಆತನೊಂದಿಗೆ ಇದ್ದವರು ಸಮಾಧಾನ ಮಾಡಲು ಯತ್ನಿಸಿದರೂ, ಆತ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ, ವಾಗ್ವಾದ ನಡೆಸಿದ್ದಾನೆ. ಆಗ ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಪೊಲೀಸರು ಅಲ್ಲಿಂದ ಹಿಂದಿರುಗಿದ ಬಳಿಕ ತಂಡದಲ್ಲಿದ್ದ ಮತ್ತೊಬ್ಬ ಘಟನೆಯ ದೃಶ್ಯ ಚಿತ್ರೀಕರಿಸುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಹರಿಹಾಯ್ದಿದ್ದಾನೆ. ಈ ವೇಳೆ ಪತ್ರಕರ್ತರೊಂದಿಗೂ ತಂಡದಿಂದ ವಾಗ್ವಾದ ನಡೆದಿದೆ. ಈ ವೇಳೆ ಸ್ಥಳದಲ್ಲಿ ಸ್ವಲ್ಪ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಸಂಜೆ ವೇಳೆ ಆತನ ಮೇಲೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡುತ್ತೇನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News