ಮೂಡುಬಿದಿರೆ: ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಸಂಸದ ಅನಂತ್ ಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2024-03-11 11:14 GMT

ಮೂಡುಬಿದಿರೆ: ಲೋಕಸಭೆಯಲ್ಲಿ 400 ಸದಸ್ಯ ಬಲ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆಂಬ ಹೇಳಿಕೆ ನೀಡಿದ ಉತ್ತರಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಅನಂತ್ ಕುಮಾರ್ ಹೆಗ್ಡೆ ಅನೇಕಬಾರಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದ್ದು ಈಬಾರಿ ಮತ್ತೊಮ್ಮೆ ಪುನರಾವರ್ತಿಸಿದ್ದಾರೆ. ಈಗ ಇರುವ ಸಂವಿಧಾನ ಹಿಂದೂ ವಿರೋಧಿ, ನಾವು ಬದಲಾಯಿಸುತ್ತೇವೆ ಎಂದು ಭಾರತ ದೇಶದಲ್ಲಿದ್ದುಕೊಂಡೇ ನಮ್ಮ ದೇಶದ ಸಂವಿಧಾನದ ವಿರುದ್ಧ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ವಿರುದ್ಧದ ಹೇಳಿಕೆ ನೀಡಿದ್ದಾರೆ.  ಈ ಹೇಳಿಕೆಯಿಂದ ಅಸಂಖ್ಯಾತ ಭಾರತೀಯ ದೇಶಪ್ರೇಮಿಗಳ, ದಲಿತ, ಅಲ್ಪಸಂಖ್ಯಾತ ಬಂಧುಗಳ ಭಾವನೆಗೆ ಧಕ್ಕೆ ತಂದಿದೆ. ಇದು ದೇಶದ ಶಾಂತಿ, ಸಾಮರಸ್ಯವನ್ನು ಕೆಡಿಸುವ ಪ್ರಯತ್ನವಾಗಿದೆ. ನಾವು ಸಂವಿಧಾನ ಬದಲಿಸಲು ಬಿಡುವುದಿಲ್ಲ, ಈತನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.

ಅನಂತ್ ಕುಮಾರ್ ಹೆಗ್ಡೆ ಭಾವಚಿತ್ರಕ್ಕೆ ಚಪ್ಪಲಿಯೇಟು

ಅನಂತ್ ಕುಮಾರ್ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸಿಗರು ಅವರ ವಿರುದ್ಧ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಮಾಜಿ ಸಚಿವ ಕೆ.ಅಭಯಚಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮುಖಂಡರಾದ ವಲೇರಿಯನ್ ಸಿಕ್ವೇರ, ಚಂದ್ರಹಾಸ ಸನಿಲ್,ರಾಜೇಶ್ ಕಡಲಕೆರೆ, ಪುರಂದರ ದೇವಾಡಿಗ, ಜಯಕುಮಾರ್ ಶೆಟ್ಟಿ, ಸುರೇಶ್ ಪ್ರಭು, ಲತೀಫ್, ವಸೀರ್ ಪುತ್ತಿಗೆ, ಶಿವಾನಂದ ಪಾಂಡ್ರು, ಗಣೇಶ್ ಮೂಡುಕೊಣಾಜೆ, ವಿವೇಕ್ ಶಿರ್ತಾಡಿ, ಕಿರಣ್ ಕುಮಾರ್ ಬೆಳುವಾಯಿ, ಸತೀಶ್ ಭಂಡಾರಿ, ಅಭಿನಂದನ್ ಬಲ್ಲಾಳ್, ಟಿ.ಎನ್.ಕೆಂಬಾರೆ, ಅರುಣ್ ಕುಮಾರ್ ಶೆಟ್ಟಿ, ಮುರಳೀಧರ, ರಜನಿ, ನಿತಿನ್ ಬೆಳುವಾಯಿ, ಶಾಬಾಝ್ ಬೆಳುವಾಯಿ, ಅಬೂಬಕ್ಕರ್ ಶಿರ್ತಾಡಿ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News