ಬೋಳಿಯಾರ್‌: ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

Update: 2024-06-10 15:55 GMT

ಕೊಣಾಜೆ: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದ ಹಿನ್ನೆಲೆಯಲ್ಲಿ ಮುಡಿಪು ಸಮೀಪದ ಬೋಳಿಯಾರ್ ಎಂಬಲ್ಲಿ ರವಿವಾರ ರಾತ್ರಿ ವಿಜಯೋತ್ಸವದ ಸಂದರ್ಭ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಬೋಳಿಯಾರ್ ಮಸೀದಿಯ ಅಧ್ಯಕ್ಷರು ನೀಡಿದ ದೂರಿನ ಮೇರೆಗೆ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಕಾರ್ಯಕರ್ತರಾದ ಸುರೇಶ್, ವಿನಯ, ಸುಭಾಷ್, ರಂಜಿತ್, ಧನಂಜಯ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚೂರಿ ಇರಿತ ಮತ್ತು ಹಲ್ಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರವಿವಾರ ರಾತ್ರಿ ಸುಮಾರು 8:45ಕ್ಕೆ ಬೋಳಿಯಾರ್‌ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ ನಡೆದಿತ್ತು. ಬೋಳಿಯಾರ್ ಮುಹಿಯುದ್ದೀನ್ ಜುಮಾ ಮಸೀದಿ ದಾಟಿ ಮೆರವಣಿಗೆ ಸಾಗಿದ ಬಳಿಕ ಕೆಲವು ಮಂದಿ ಮಸೀದಿಯ ಮುಂದೆ ಕೋಮು ಪ್ರಚೋದಿತ ಘೋಷಣೆಗಳನ್ನು ಕೂಗಿದ್ದಾರೆಂದು ಆರೋಪಿಸಿ ಮಸೀದಿಯ ಅಧ್ಯಕ್ಷ ಪಿ.ಕೆ.ಅಬ್ದುಲ್ಲಾ ದೂರು ನೀಡಿದ್ದರು. ಅದರ ಆಧಾರದಲ್ಲಿ ಬಿಜೆಪಿ ಕಾರ್ಯಕರ್ತರಾದ ಸುರೇಶ್, ವಿನಯ, ಸುಭಾಷ್, ರಂಜಿತ್, ಧನಂಜಯ ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ಸಂದರ್ಭ ಆರೋಪಿಗಳು ಮಸೀದಿಯ ಮುಂದೆ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಾರೆ. ಆ ವೇಳೆ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಮದ್ರಸ ಬಿಡುವ ಸಮಯವೂ ಆಗಿದ್ದರಿಂದ ಇಲ್ಲಿಂದ ತೆರಳುವಂತೆ ಕಾರ್ಯಕರ್ತರಿಗೆ ಸೂಚಿಸಿದೆವು. ಆದರೂ ಘೋಷಣೆಗಳನ್ನು ಕೂಗಿ ಕೋಮು ಪ್ರಚೋದನೆಗೆ ಮುಂದಾಗಿ ಬೆದರಿಕೆ ಹಾಕಿದ್ದಾರೆ. ಮಸೀದಿಗೆ ನುಗ್ಗಲು ಯತ್ನಿಸಿದ್ದಾರೆ. ಅವಾಚ್ಯ ಶಬ್ದದಿಂದ ಬೈದು ಗಲಾಟೆ ಮಾಡಿದ್ದಾರೆಂದು ಮಸೀದಿಯ ಅಧ್ಯಕ್ಷರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಐವರು ಆರೋಪಿಗಳ ಬಂಧನ: ಬಿಜೆಪಿ ಕಾರ್ಯಕರ್ತರಿಬ್ಬರ ಮೇಲೆ ನಡೆದ ಹಲ್ಲೆ ಮತ್ತು ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರೋಪಿಗಳಾದ ಮುಹಮ್ಮದ್ ಶಾಕೀರ್ (28), ಅಬ್ದುಲ್ ರಝಾಕ್(40), ಅಬೂಬಕ್ಕರ್ ಸಿದ್ದೀಕ್(35), ಸವಾದ್(18) ಹಾಗೂ ಮೋನು ಯಾನೆ ಹಫೀಝ್(24) ಎಂಬವರನ್ನು ಬಂಧಿಸಲಾಗಿದೆ.

ವಿಜಯೋತ್ಸವದ ಮೆರವಣಿಗೆಯು ಮಸೀದಿ ದಾಟಿ ಹೋದ ಬಳಿಕ ಕೆಲವು ಯುವಕರು ಮಸೀದಿಯ ಮುಂದೆ ನಿಂತು ಘೋಷಣೆಗಳನ್ನು ಕೂಗಿದ್ದರು. ಆ ಸಂದರ್ಭ ಅಲ್ಲೇ ಇದ್ದ ಕೆಲವರು ಬಿಜೆಪಿ ಕಾರ್ಯಕರ್ತನ್ನು ಆಕ್ಷೇಪಿಸಿದಾಗ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಇದರಿಂದ ಆಕ್ರೋಶಿತರಾದ ಯುವಕರ ತಂಡ ಬಿಜೆಪಿ ಕಾರ್ಯಕರ್ತರನ್ನು ಅಟ್ಟಾಡಿಸಿಕೊಂಡು ಹೋಗಿದ್ದರು. ಆ ಸಂದರ್ಭ ಕಾರ್ಯಕರ್ತರು ಬೋಳಿಯಾರ್ ಜಂಕ್ಷನ್ ದಾಟಿದ್ದರು. ಅಲ್ಲಿಗೆ ಬಂದ ಯುವಕರ ತಂಡವು ಧರ್ಮನಗರದ ಹರೀಶ್ ಅಂಚನ್ ಮತ್ತು ನಂದನ್ ಕುಮಾರ್, ಕಿಶನ್ ಕುಮಾರ್ ಎಂಬವರಿಗೆ ಹಲ್ಲೆ ನಡೆಸಿತ್ತು. ಈ ವೇಳೆ ಚೂರಿಯಿಂದ ಇರಿಯಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಬಿಜೆಪಿ ಕಾರ್ಯಕರ್ತರ ವಿಜಯೋತ್ಸವದ ವಾಹನವು ಮಸೀದಿ ಬಳಿ ನಿಂತಿದ್ದು, ಬಳಿಕ ಮುಂದಕ್ಕೆ ಸಾಗಿದೆ. ನಂತರ ಕೆಲವು ವಾಹನಗಳು ಮಸೀದಿಯನ್ನು ಹಾದು ಹೋಗಿದೆ. ಇದಾದ ಬಳಿಕ ಆರೋಪಿಗಳೆಂದು ಹೇಳಲಾದ ಬಿಜೆಪಿ ಕಾರ್ಯಕರ್ತರು ಮಸೀದಿಯ ಗೇಟಿನ ಮುಂಭಾಗದಲ್ಲಿ ನಿಂತು ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ. ಆ ವೇಳೆ ಅಲ್ಲಿದ್ದವರು ಮುಂದೆ ಹೋಗುವಂತೆ ಸೂಚಿಸಿದಾಗ ಆರೋಪಿಗಳು ಆಕ್ಷೇಪ ವ್ಯಕ್ತಪಡಿ ತೆರಳಿದ್ದಾರೆ. ನಂತರ ಮತ್ತೆ ವಾಪಸ್ ಬಂದು ತಮ್ಮನ್ನು ತೆರಳಲು ಹೇಳಿದವರಾರೆಂದು ಪ್ರಶ್ನಿಸಿದ್ದಾರೆ. ಇದರಿಂದ ಕೆಲವು ಯುವಕರು ಆಕ್ಷೇಪಿಸಿ ಅಟ್ಟಾಡಿಸಿದಾಗ ಕಾರ್ಯಕರ್ತರು ಬೋಳಿಯಾರ್ ಜಂಕ್ಷನ್ ಬಳಿ ತಲುಪಿದ್ದರು. ಅಲ್ಲಿಗೆ ಹೋದ ಯುವಕರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ವೇಳೆ ಅವರಲ್ಲಿ ಚೂರಿ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಸೀದಿಯ ಬಳಿ ಬಂದ ಬಿಜೆಪಿ ಕಾರ್ಯಕರ್ತರು ನಿಮ್ಮ ಮಸೀದಿಯನ್ನು ಒಡೆದು ಹಾಕುತ್ತೇವೆ, ನಿಮ್ಮನ್ನೂ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ಬೆದರಿಸಿ ಮಸೀದಿಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಅವರ ಜೊತೆ ಕೆಲವು ಮಂದಿ ಸೇರಿಕೊಂಡು ಬ್ಯಾರಿಗಳಿಗೆ ಬುದ್ಧಿ ಕಲಿಸುತ್ತೇವೆಂದು ಹೇಳಿ ಮಾರಕಾಯುಧಗಳಿಂದ ಹಲ್ಲೆ ಮಾಡಲು ಮುಂದಾಗಿದ್ದರೆಂದು ಮಸೀದಿಯ ಅಧ್ಯಕ್ಷ ಅಬ್ದುಲ್ಲಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News