ಬೆಳ್ತಂಗಡಿ: ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಕೊಡುವುದಾಗಿ ನಂಬಿಸಿ ವಂಚನೆ; ಆರೋಪ

ಬೆಳ್ತಂಗಡಿ; ಅಕ್ರಮಸಕ್ರಮದಲ್ಲಿ ಜಮೀನು ಮಂಜೂರು ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 4.95 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ಮೂಡುಕೋಡಿ ಗ್ರಾಮದ ಗ್ರಾಮಕರಣಿಕ ಸುದೇಶ್ ಕುಮಾರ್ ಹಾಗೂ ಆತನ ಪತ್ನಿ ಮೀನಾಕ್ಷಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯ ನಿವಾಸಿ ರೋಯಿ ವರ್ಗೀಸ್ ಎಂಬವರು ದೂರು ನೀಡಿದವರಾಗಿದ್ದಾರೆ.
ರೋಯಿ ವರ್ಗೀಸ್ ಅವರು ಮೂಡುಕೋಡಿ ಗ್ರಾಮದಲ್ಲಿ ಪಟ್ಟಾ ಜಮೀನು ಹೊಂದಿದ್ದು ಅದಕ್ಕೆ ತಾಗಿ ಕೊಂಡಿರುವ ಕುಮ್ಕಿ ಜಮೀನಿಗೆ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದರು. ಜಾಗ ಅಳತೆ ಮಾಡಿದ ಸುದೇಶ್ ಕುಮಾರ್ ಕಡತ ತಯಾರಿಸಿ ಅಕ್ರಮಸಕ್ರಮದಲ್ಲಿ ಮಂಜೂರುಗೊಳಿಸಿ ಕೊಡುವುದಾಗಿ ಹೇಳಿ ಕಳೆದ ಎರಡು ವರ್ಷದಲ್ಲಿ 4,55,000 ರೂ. ಅವರ ಹಾಗೂ ಪತ್ನಿ ಮೀನಾಕ್ಷಿ ಅವರ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಅಲ್ಲದೆ 40ಸಾವಿರ ರೂ.ವನ್ನು ನಗದಾಗಿ ಪಡೆದಿದ್ದಾರೆ ಆದರೆ ಅಕ್ರಮ ಸಕ್ರಮದಲ್ಲಿ ಜಮೀನು ಮಂಜೂರಾಗದ ಹಿನ್ನಲೆಯಲ್ಲಿ ರೋಯಿ ಅವರು ಪ್ರಶ್ನಿಸಿದಾಗ ಹಣವನ್ನೂ ವಾಪಾಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಸುದೇಶ್ ಕುಮಾರ್, ಅವರ ಪತ್ನಿ ಮೀನಾಕ್ಷಿ ವಿರುದ್ಧ ಕಲಂ 417, 420, IPC ಯಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.