ಮೀನು ಮಾರಾಟ ಫೆಡರೇಷನ್‌ಗೆ ಹಣ ಪಾವತಿಸದ ಪ್ರಕರಣ: ಆರೋಪಿ ಬಂಧನ

Update: 2023-09-21 13:22 GMT

ಮಂಗಳೂರು , ಸೆ.21: ನ್ಯಾಯಾಲಯದ ಆದೇಶದಂತೆ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿಮಿಟೆಡ್‌ಗೆ ಹಣ ಪಾವತಿಸದ ಆರೋಪದಲ್ಲಿ ಮಂಜುನಾಥ ಖಾರ್ವಿ ಎಂಬಾತನನ್ನು ಪೊಲೀಸರು  ಬಂಧಿಸಿದ್ದಾರೆ.

ಫೆಡರೇಷನ್‌ಗೆ ಮಂಜುನಾಥ ಖಾರ್ವಿ ನೀಡಿದ ಮೂರು ಚೆಕ್‌ಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ಒಟ್ಟು 88 ಲ.ರೂ. ಪಾವತಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು.

ನ್ಯಾಯಾಲಯದ ತೀರ್ಪಿನಂತೆ ಹಣ ಮರುಪಾವತಿ ಮಾಡಲು ವಿಫಲನಾದ ಮಂಜುನಾಥ್ ಖಾರ್ವಿ ವಿರುದ್ಧ ವಾರಂಟ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ 5ನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸೆಪ್ಟೆಂಬರ್ 20 ರಂದು ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿ. ಸಂಸ್ಥೆಯಿಂದ ಮಂಜುನಾಥ ಖಾರ್ವಿ ಮೀನು ಖರೀದಿ ಮಾಡಿದ್ದ ಅಲ್ಲದೆ ಫೆಡರೇಷನ್‌ಗೆ ಮೀನು ಮಾರಾಟವಾದ ಕಮಿಷನ್ ಕೂಡ ಬಾಕಿ ಇರಿಸಿದ್ದ. ಈ ಮೊತ್ತಕ್ಕೆ ಮೂರು ಚೆಕ್‌ ಗಳನ್ನು ಫೆಡರೇಷನ್‌ಗೆ ನೀಡಿದ್ದ. ಆ ಚೆಕ್‌ಗಳನ್ನು ಬ್ಯಾಂಕ್‌ಗೆ ನೀಡಿದಾಗ ಖಾತೆಯಲ್ಲಿ ಹಣವಿಲ್ಲದೆ ಅಮಾನತು ಗೊಂಡಿದ್ದವು ಮತ್ತು ಇದಕ್ಕೆ ಸಂಬಂಧಿಸಿದ ನೋಟಿಸ್ ನೀಡಿದರೂ ಬಾಕಿ ಮೊತ್ತ ಪಾವತಿರಲಿಲ್ಲ ಎನ್ನಲಾಗಿದೆ. ಈ ಕುರಿತು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಲಾಗಿತ್ತು. ಮಂಜುನಾಥ ಖಾರ್ವಿ ವಿರುದ್ಧ ಮೂರು ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯ ಮೂರು ಪ್ರಕರಣಗಳಲ್ಲಿ ಮಂಜುನಾಥ ಖಾರ್ವಿಗೆ 5 ಲಕ್ಷ ರೂ., 53 ಲಕ್ಷ ರೂ. ಮತ್ತು 30 ಲಕ್ಷ ರೂ. ಸೇರಿದಂತೆ ಒಟ್ಟು 88 ಲಕ್ಷ ರೂ. ಪಾವತಿಸುವಂತೆ ಈ ಹಿಂದೆ ತೀರ್ಪು ನೀಡಿತ್ತು.

ದೂರುದಾರರ ಪರ ವೆರಿಟಾಸ್ ಲೆಗೀಸ್ ಅಸೋಸಿಯೇಷನ್ ಮಂಗಳೂರಿನ ವಕೀಲರಾದ ರಾಘವೇಂದ್ರ ರಾವ್, ಗೌರಿ ಶೆಣೈ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News